ಬೆಂಗಳೂರು: ಸಂಘ ಪರಿವಾರದ ಕೆ.ಎನ್ ಗೋವಿಂದಾಚಾರ್ಯ ಅವರು ಸ್ಥಾಪಿಸಿರುವ ಭಾರತ ವಿಕಾಸ ಸಂಗಮ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ತಮ್ಮ ಭಾಗವಹಿಸುವಿಕೆ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.
2025ರ ಜನವರಿ ಮಾಹೆಯಲ್ಲಿ ಕಲಬುರ್ಗಿಯ ಸೇಡಂನಲ್ಲಿ ಭಾರತ ವಿಕಾಸ ಸಂಗಮ ಸಂಸ್ಥೆಯು ʻಭಾರತೀಯ ಸಂಸ್ಕೃತಿ ಉತ್ಸವ-7ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯೊಂದಿಗೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಘಪರಿವನ್ನು ಸೈದ್ದಾಂತಿಕವಾಗಿ ವಿರೋಧಿಸುವ ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಸಾಕಷ್ಟು ವಿರೋಧ, ಆಕ್ಷೇಪ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಸದ್ಯ ತಮ್ಮ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಸಿಎಂ ಸಿದ್ದರಾಮಯ್ಯ ಅವರು ಸಂಘ ಪರಿವಾರದ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವದನ್ನು ಗಮನಿಸಿದ್ದೇನೆ. ಈ ಬಗ್ಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಿರುವ ಸಂಸ್ಥೆಯ ಹಿನ್ನೆಲೆಯ ವಿವರವನ್ನು ತರಿಸಿ ಪರಿಶೀಲಿಸಿದ ನಂತರ ಅದರಲ್ಲಿ ಭಾಗವಹಿಸದೆ ಇರಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.





