ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ವಾಪಾಸ್ ಪಡೆದ ಬೆನ್ನಲ್ಲೇ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸುವ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಈ ಬಗ್ಗೆ ಹೋರಾಟ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ನೆನ್ನೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಇಂದು (ಶನಿವಾರ) ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಭಂಡ ಸರ್ಕಾರವಾಗಿದೆ. ತಾವು ನೀಡಿದ ಗ್ಯಾರೆಂಟಿ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸದೇ ಈ ರೀತಿಯ ಕೆಲಸಕ್ಕೆ ಕೈಹಾಕಿ ಜನರ ದಿಕ್ಕು ತಪ್ಪಿಸುತ್ತಿದೆ. ಇದನ್ನು ಯಾರು ಒಪ್ಪುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಹಿಜಾಬ್ ನಿಷೇಧ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.
ಹಿಜಾಬ್ ನಿಷೇಧ ಮಾಡುವಂತೆ ಯಾವ ಮುಸ್ಲಿಂ ನಾಯಕರು ಕೇಳಿದ್ದರು? ಇಂತಹ ದೊಂಬರಾಟಗಳನ್ನು ಸಿಎಂ ಬಿಡಬೇಕು. ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಸಮನಾಗಿರಬೇಕು. ಹಿಜಾಬ್ ನಿಷೇಧ ಮೂಲಕ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವ ಕೆಲಸವನ್ನು ಸರ್ಕಾರ ಬಿಡಬೇಕು ಎಂದು ಹೇಳಿದರು.





