ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ) ನಿವೇಶನ ಹಂಚಿಕೆ ಅಕ್ರಮ ಹಗರಣದ ಪ್ರಕರಣದಲ್ಲಿ ಯಾವುದೇ ಬಲಂವತದ ಕ್ರಮಕ್ಕೆ ಮುಂದಾಗಬಾರುದು ಎಂದು ಹೈಕೋರ್ಟ್ ಇ.ಡಿಗೆ ನಿರ್ದೇಶಿಸಿದೆ.
ಜಾರಿ ನಿರ್ದೇಶನಾಲಯದ (ಇಡಿ) ಕ್ರಮದ ವಿರುದ್ಧ ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಕಾರ್ಯದರ್ಶಿ ಭೋಜರಾಜ ಅವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಈ ಕುರಿತಾದ ಮಧ್ಯಂತದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಕೆ.ಸೋಮಶೇಖರ್ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂಘದ ಸದಸ್ಯರ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಡಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಇರುವಾಗ ಜಾರಿ ನಿರ್ದೇಶನಾಲಯವು ಬಡಾವಣೆಗಾಗಿ ಗುರುತಿಸಿದ್ದ ಜಾಗವನ್ನು ಜಪ್ತಿ ಮಾಡಲಾಗಿದೆ. ಹಾಗಾಗಿ ಜಪ್ತಿ ಆದೇಶವನ್ನು ರದ್ದು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿ ಇ.ಡಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಜಪ್ತಿ ಕ್ರಮಗಳ ವಿವರಣೆ ನೀಡುವಂತೆ ಸೂಚಿಸಿದೆ.