ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆಯಾ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇಂದಿರಾನಗರ, ಕೋರಮಂಗಲ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ,ಯಲ್ಲಿ ಅತೀ ಹೆಚ್ಚು ಜನರು ಸೇರಲಿದ್ದು, ಅಲ್ಲಿನ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ.
ಇದೆಲ್ಲದರ ಜೊತೆಗೆ ಡ್ರೋನ್ ಕ್ಯಾಮರಾ ನಿಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮರಾಗಳನ್ನು ಸಹ ಅಳವಡಿಕೆ ಮಾಡಲಾಗುತ್ತದೆ.
ಇನ್ನು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆಯೂ ಸಭೆ ನಡೆಸಲಾಗಿದ್ದು, ಮಧ್ಯರಾತ್ರಿ ಒಂದು ಗಂಟೆ ತನಕ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ.
ಹೊಸ ವರ್ಷದ ವಿಶ್ ಮಾಡುವ ನೆಪದಲ್ಲಿ ಕೂಗಾಟ, ಪೀಪಿಗಳನ್ನು ಊದುವುದು, ವಿಚಿತ್ರ ರೀತಿಯ ಮಾಸ್ಕ್ ಹಾಕಿಕೊಂಡು ತೊಂದರೆ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಬೆಂಗಳೂರಿನ ಹೊರವಲಯದ ರೇವ್ ಪಾರ್ಟಿಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅನಧಿಕೃತವಾಗಿ ಪಾರ್ಟಿ ಆಯೋಜನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.