ಬೆಂಗಳೂರು: ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿ ನಡೆಯುತ್ತಿರುವ ವಂಚನೆಗಳನ್ನು ತಡೆಗಟ್ಟಲು ದೂರಸಂಪರ್ಕ ಇಲಾಖೆ ಇಂದಿನಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಶಿಕ್ಷೆಗೆ ಒಳಪಡಬೇಕಾಗುತ್ತದೆ.
ಸಿಮ್ ಮಾರಾಟಗಾರರು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ದೂರಸಂಪರ್ಕ(DOT) ಇಲಾಖೆಯ ಹೊಸ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂ.ವರೆಗೆ ದಂಡ ತೆರಬೇಕಾಗುತ್ತದೆ.
ಹೊಸ ನಿಯಮಗಳಲ್ಲಿ ಏನಿದೆ?
ಸಿಮ್ ಮಾರಾಟಗಾರರು ತಮ್ಮ ಅಂಗಡಿಯ ಸಿಬ್ಬಂದಿಯ ಎಲ್ಲಾ ಮಾಹಿತಿಯ ದಾಖಲೆಯನ್ನು ಇಟ್ಟುಕೊಳ್ಳಬೇಕು. ಅಂಗಡಿ ಸಿಬ್ಬಂದಿ ಕೂಡ ಪೊಲೀಸ್ ಪರಿಶೀಲನೆಗೆ ಹೋಗಬೇಕಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಕಾರ್ಪೊರೇಟ್ ID ಸಂಖ್ಯೆ ಅಥವಾ CIN ಸಂಖ್ಯೆಯನ್ನು ಪ್ರತಿ ಸಿಮ್ ಕಾರ್ಡ್ ಅಂಗಡಿಗೆ ನೀಡಲಾಗುತ್ತದೆ. ಈ ತುರ್ತು ಸಂಖ್ಯೆ ಇಲ್ಲದೆ ಯಾರೂ ಸಿಮ್ ಕಾರ್ಡ್ ಮಾರಾಟ ಮಾಡುವಹಾಗಿಲ್ಲ.
ನೊಂದಣಿ ಇಲ್ಲದೆ ಸಿಮ್ ಮಾರುವಹಾಗಿಲ್ಲ:
DoT ಅಡಿಯಲ್ಲಿ ನೋಂದಾಯಿಸಲು ಚಿಲ್ಲರೆ ಅಂಗಡಿಯು ಆಧಾರ್, ಪ್ಯಾನ್ ಪಾಸ್‌ಪೋರ್ಟ್ ಮತ್ತು ಜಿಎಸ್‌ಟಿ ವಿವರಗಳನ್ನು ಒದಗಿಸಬೇಕು. ನೋಂದಣಿ ಇಲ್ಲದೆ ಅಂಗಡಿಯವರು ಸಿಮ್ ಕಾರ್ಡ್ ಮಾರಾಟ ಮಾಡಲು ಸಾಧ್ಯವಿಲ್ಲ. ನೋಂದಣಿ ಇಲ್ಲದೆ ಅಂಗಡಿಯಲ್ಲಿ ಸಿಮ್ ಕಾರ್ಡ್ ಮಾರಾಟ ಮಾಡಿದರೆ, ಅದರ ಐಡಿಯನ್ನು ನಿರ್ಬಂಧಿಸಲಾಗುತ್ತದೆ.
ಸಿಮ್ ಕಳೆದುಕೊಂಡರೆ ಏನು ಮಾಡಬೇಕು?
ಸಿಮ್ ಕಾರ್ಡ್ ಕಳೆದುಕೊಂಡರೆ ಸಂಬಂಧಪಟ್ಟ ವ್ಯಕ್ತಿ ಪರಿಶೀಲನೆ ಪ್ರಕ್ರಿಯೆಯ ಮೂಲಕವೇ ಹೊಸ ಸಿಮ್ ಪಡೆಯಬೇಕು. ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಜಿಯೋ, ಏರ್ಟೆಲ್, ವಿ, ಬಿಎಸ್ಎನ್ಎಲ್ಗೆ ನಿರ್ದೇಶನ ನೀಡಲಾಗಿದೆ.