Mysore
29
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ರಿವರ್ ಮೊಬಿಲಿಟಿ ಕಂಪನಿಗೆ ಅಗತ್ಯ ಜಮೀನು ಮಂಜೂರು: ಎಂ‌.ಬಿ ಪಾಟೀಲ್‌

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಪ್ರಮಾಣವನ್ನು ಏರಿಸಲು ಬಯಸಿರುವ ರಿವರ್ ಮೊಬಿಲಿಟಿ ಕಂಪನಿಗೆ ಅಗತ್ಯ ಭೂಮಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ.

ಗುರುವಾರ ತಮ್ಮನ್ನು ಭೇಟಿಯಾದ ಕಂಪನಿಯ ಸಿಇಒ ಅರವಿಂದ್ ಮಣಿ ಮತ್ತು ಉಪಾಧ್ಯಕ್ಷೆ ಮಯೂರಿ ಮೋಹಿಡೇಕರ್ ಜತೆ ಅವರು ಭವಿಷ್ಯದ ಸಂಪರ್ಕ ವ್ಯವಸ್ಥೆ ಕುರಿತು ಮಾತುಕತೆ ನಡೆಸಿದರು.

ಸದ್ಯಕ್ಕೆ ರಿವರ್ ಮೊಬಿಲಿಟಿ ಕಂಪನಿಯು ಹೊಸಕೋಟೆ ಬಳಿ ಇರುವ ತನ್ನ ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ 1.20 ಲಕ್ಷ ಇ.ವಿ. ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ. ಇದನ್ನು ವರ್ಷಕ್ಕೆ 5 ಲಕ್ಷಕ್ಕೆ ಕೊಂಡೊಯ್ಯಲು ಕಂಪನಿ ಬಯಸಿದ್ದು, ಅದಕ್ಕಾಗಿ ಜಮೀನಿಗೆ ಬೇಡಿಕೆ ಇಟ್ಟಿದೆ. ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ತೋರಿಸಿದ್ದು, ಬಯಸಿದ ಪ್ರಕಾರ ಜಮೀನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಂಪನಿಯು ಇ.ವಿ.‌ ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸುತ್ತಿದ್ದು, 400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಯ ಇ.ವಿ. ವಾಹನವು ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ. ಓಡಲಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಇ.ವಿ. ಕ್ಷೇತ್ರದಲ್ಲಿ ಹೂಡಿಕೆಗೆ ಯಥೇಚ್ಛ ಅವಕಾಶಗಳಿವೆ. ಜತೆಗೆ ಸರಕಾರ ಕೂಡ ನಾನಾ ಬಗೆಯ ಉತ್ತೇಜನವನ್ನು ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಸಾಂಪ್ರದಾಯಿಕ ವಾಹನಗಳು ಜನಪ್ರಿಯವಾಗಲಿವೆ ಎಂದು ಅವರು ನುಡಿದರು.

ಇದೇ ಸಂದರ್ಭದಲ್ಲಿ ಅವರು ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಒಂದು ಸುತ್ತು ಚಲಾಯಿಸಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಇದ್ದರು.

Tags: