ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ ಏರ್ಪಟ್ಟಿತ್ತು. ಈ ಮಧ್ಯೆಯೇ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಕಲಬುರಗಿಯ ಹಝ್ರತ್ ಖ್ವಾಜಾ ಬಂದಾ ನವಾಝ್ ದರ್ಗಾದ ಸಜ್ಜಾದ ನಶೀನ್ ಸೈಯದ್ ಮಹಮ್ಮದ್ ಅಲಿ ಹುಸೈನಿ ನೇಮಕವಾಗಿದ್ದಾರೆ.
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಇಂದು(ಮಾರ್ಚ್.15) ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ನಶೀನ್ ಸೈಯದ್ ಮಹಮ್ಮದ್ ಅಲಿ ಹುಸೈನಿ ಅವರನ್ನು ಆಯ್ಕೆ ಮಾಡಲಾಗಿದೆ. ಸೈಯದ್ ಮಹಮ್ಮದ್ ಅಲಿ ಹುಸೈನಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಹುದ್ದೆಗೆ ಏನಿದು ಜಟಾಪಟಿ?
ವಕ್ಫ್ ಬೋರ್ಡ್ ಚುನಾವಣೆಗೂ ಮುನ್ನ ಅನ್ವರ್ ಪಾಷಾ ಪರವಾಗಿ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಎರಡೂವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆ ಸೂತ್ರದಂತೆ ಅಧ್ಯಕ್ಷ ಸ್ಥಾನವನ್ನು ತಮ್ಮ ಬೆಂಬಲಿಗನಿಗೆ ಕೊಡಿಸಿ ಎಂದು ಲಾಬಿ ಮಾಡಿದ್ದರು. ಅಲ್ಲದೇ ಶುಕ್ರವಾರ(ನಿನ್ನೆ) ರಾತ್ರಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿಯೂ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬೆಂಬಲಿಗನನ್ನೇ ಆಯ್ಕೆ ಮಾಡಿದ್ದಾರೆ.