ಬೆಂಗಳೂರು: ನಾಗಮಂಗಲದಲ್ಲಿ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಗಮಂಗಲದ ಗಲಭೆಯನ್ನು ಕುಮಾರಸ್ವಾಮಿ ಅವರೇ ಮಾಡಿಸಿರಬಹುದು. ನಾನು ಕೂಡ ಅವರ ಮೇಲೆ ಆರೋಪ ಮಾಡಬಹುದಲ್ಲ ಎಂದು ಟಾಂಗ್ ನೀಡಿದರು.
ಎಚ್‌ಡಿಕೆ ಪ್ರತಿ ವಾರ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಾರೆ. ಆದ್ದರಿಂದ ಅವರೇ ಗಲಾಟೆ ಮಾಡಿಸಿರಬಹುದು. ಕುಮಾರಸ್ವಾಮಿ ಪ್ರತಿ ನಿತ್ಯ ಒಂದೊಂದು ಹೇಳಿಕೆ ಕೊಡುತ್ತಾರೆ ಎಂದು ಕಿಡಿಕಾರಿದರು.
ಈ ಹಿಂದೆ ಹಲವಾರು ಗಲಭೆಗಳಾಗಿದ್ದವು. ಆಗ ಕುಮಾರಸ್ವಾಮಿ ಅವರು, ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದರು. ಈಗ ಏನೇ ಘಟನೆಗಳಾದರೂ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಮೇಲೆ ಗೂಬೆ ಕೂರಿಸುತ್ತಾರೆ. ಏನನ್ನೂ ತಿಳಿಯದೇ ಆರೋಪ ಮಾಡುವುದು ತಪ್ಪು. ಘಟನೆ ಸಂಬಂಧ ಹಲವಾರು ಜನರ ಬಂಧನವಾಗಿದೆ. ವಿಚಾರಣೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.