ತುಮಕೂರು: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಐದು ಹುಲಿಗಳು ಹಾಗೂ 18 ಕೋತಿಗಳ ಮಾರಣಹೋಮ ನಡೆದ ಬೆನ್ನಲ್ಲೇ ಇದೀಗ ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸಾವು ಸಂಭವಿಸಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸದ್ಯ ಸಾವನ್ನಪ್ಪಿರುವ ನವಿಲುಗಳ ಸ್ಯಾಂಪಲ್‌ನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ಏನೆಂದು ತಿಳಿಯಲಿದೆ.
ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನಿನಲ್ಲಿ 5 ಗಂಡು ಹಾಗೂ 14 ಹೆಣ್ಣು ನವಿಲುಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಇವು ಆಗಸ್ಟ್.1ರಂದೇ ಮೃತಪಟ್ಟಿವೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಾಣಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.





