ಮೈಸೂರು: ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಹೋರಾಟ ನಿಲ್ಲಿಸಲು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರು ಆಮಿಷವೊಡ್ಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಸ್ನೇಹಮಯಿ ಕೃಷ್ಣ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದು, ಹೋರಾಟ ಹತ್ತಿಕ್ಕಲು ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಕರಣದ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಿರುವ ಸ್ನೇಹಮಯಿ ಕೃಷ್ಣ ಅವರು, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಡಿಸೆಂಬರ್.13ರಂದು ಮುಡಾ ಬಳಿ ನನ್ನನ್ನು ಭೇಟಿ ಮಾಡಿದ್ದರು.
ಪಾರ್ವತಮ್ಮ ಮಾನಸಿಕವಾಗಿ ನೊಂದಿದ್ದಾರೆ. ಪ್ರಕರಣ ಸಿಬಿಐಗೆ ಕೊಡಿ ಎಂಬ ಅರ್ಜಿ ವಾಪಸ್ ಪಡೆಯಿರಿ. ಲೋಕಾಯುಕ್ತದಿಂದ ನಮಗೇನೂ ಸಮಸ್ಯೆಯಿಲ್ಲ. ನಿಮಗೆ ಕೇಳಿದಷ್ಟು ಹಣ ಕೊಡುತ್ತೇನೆ ಎಂದು ಹೇಳಿದ್ದಾನೆ ಎಂದರು.
ಆದರೆ ಇದಕ್ಕೆಲ್ಲಾ ನಾನು ಒಪ್ಪಲಿಲ್ಲ. ಆದರೆ ಸಿಬಿಐ ತನಿಖೆ ಬೇಡ ಎಂದು ಆಮಿಷವೊಡ್ಡಿದ್ದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ. ನನಗೆ ಹಣದ ಆಮಿಷವೊಡ್ಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡುವುದಾಗಿಯೂ ತಿಳಿಸಿದ್ದಾರೆ.
ಇನ್ನು ಮುಂದುವರಿದು ಮಾತನಾಡಿದ ಅವರು, ಮುಡಾ ಹಗರಣದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಸಿಎಂ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.