ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಇಡಿ ಅಧಿಕಾರಿಗಳು ರೇಡ್ ನಡೆಸಿದ ಬೆನ್ನಲ್ಲೇ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಮೈಸೂರು ಮುಡಾ ಹಗರಣ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಒಂದಲ್ಲಾ ಒಂದು ಬೆಳವಣಿಗೆ ನಡೆಯುತ್ತಲೇ ಇದೆ. ಹೀಗಿರುವಾಗಲೇ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಳಿಗ್ಗೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ದಿನೇಶ್ ಕುಮಾರ್ ವಾಕಿಂಗ್ ಮಾಡುತ್ತಿದ್ದು, ಇಡಿ ಅಧಿಕಾರಿಗಳು ಮನೆಗೆ ಬಂದು ಶೋಧ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳದಿಂದಲೇ ಪರಾರಿಯಾಗಿದ್ದಾರೆ. ಅಲ್ಲದೇ, ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಭಾರೀ ಅನುಮಾನ ಶುರುವಾಗಿದೆ ಎನ್ನಲಾಗುತ್ತಿದೆ.