ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನೆಸಿ ಹೈಕೋರ್ಟ್‍ಗೆ ಮೊರೆ ಹೋಗಿದ್ದಾರೆ.
ವಿನಯ್ ಕುಲಕರ್ಣಿ ಮಾತ್ರವಲ್ಲದೆ ಈ ಪ್ರಕರಣದಲ್ಲಿ ಶಿಕ್ಷೆಗೆ ಒಳಗೊಂಡಿರುವ ಮತ್ತೊಬ್ಬ ಆರೋಪಿಯಾದ ಚಂದ್ರಶೇಖರ್ ಇಂಡಿ ಕೂಡ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅವರೂ ತಮ್ಮ ವಿರುದ್ಧದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ, ತೀರ್ಪಿಗೆ ತಡೆಯಾಜ್ಞೆ ಕೋರಿ ಹೋರಾಟ ಆರಂಭಿಸಿದ್ದಾರೆ.
ಜೀವಾವಧಿ ಶಿಕ್ಷೆ ವಿಧಿಸಿರುವ ಕಾರಣದಿಂದ ಅವರ ಶಾಸಕರ ಸ್ಥಾನಕ್ಕೂ ಧಕ್ಕೆಯುಂಟಾಗಿದೆ. ಹೀಗಾಗಿ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಗೆ ಕುಲಕರ್ಣಿ ಮೇಲ್ಮನವಿ ಸಲ್ಲಿಸಿದ್ದಾರೆ. ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಜೀವಾವಧಿ ಶಿಕ್ಷೆ ಪ್ರಶ್ನಿಸಿ, ತಮಗೆ ವಿಧಿಸಿರುವ ಶಿಕ್ಷೆ ಸರಿಯಲ್ಲ ಎಂದು ವಾದಿಸಿ, ತೀರ್ಪನ್ನು ರದ್ದುಪಡಿಸಬೇಕು ಅಥವಾ ಮರುಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ, ಜೀವಾವಧಿ ಶಿಕ್ಷೆಯ ತೀರ್ಪು ಜಾರಿಯಾಗದಂತೆ ತಡೆಯಾಜ್ಞೆ ನೀಡಲು ಹೈಕೋರ್ಟ್‍ಗೆ ವಿಶೇಷವಾಗಿ ವಿನಂತಿ ಮಾಡಿದ್ದಾರೆ.
ತಡೆಯಾಜ್ಞೆ ದೊರೆತರೆ, ಶಿಕ್ಷೆಯ ಪರಿಣಾಮ ತಾತ್ಕಾಲಿಕವಾಗಿ ನಿಲುಗಡೆಯಾಗುವ ಸಾಧ್ಯತೆ ಇದೆ. ಹಾಗಾದರೆ, ಶಾಸಕರ ಸ್ಥಾನವನ್ನು ತಕ್ಷಣ ಕಳೆದುಕೊಳ್ಳದೇ, ಕಾನೂನು ಹೋರಾಟ ಮುಂದುವರೆಸಲು ವಿನಯ್ ಕುಲಕರ್ಣಿಗೆ ಅವಕಾಶ ಸಿಗಬಹುದು. ಆದ್ದರಿಂದಲೇ ಅವರು ತುರ್ತುವಾಗಿ ಮೇಲ್ಮನವಿ ಸಲ್ಲಿಸಿದ್ದಾರೆ.
ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ದಾಖಲಿಸಿಕೊಂಡಿದ್ದು, ಸೋಮವಾರ ಈ ಮೇಲ್ಮನವಿಗೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ವಿಚಾರಣೆಯಲ್ಲಿ ಹೈಕೋರ್ಟ್ ಯಾವ ರೀತಿಯ ಮಧ್ಯಂತರ ಆದೇಶ ನೀಡುತ್ತದೆ ಎಂಬುದರ ಮೇಲೆ ವಿನಯ್ ಕುಲಕರ್ಣಿಯ ರಾಜಕೀಯ ಭವಿಷ್ಯ ಬಹಳ ಮಟ್ಟಿಗೆ ಅವಲಂಬಿತವಾಗಿದೆ. ಕಳೆದ 17 ರಂದು ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿತ್ತು.





