Mysore
28
few clouds

Social Media

ಶನಿವಾರ, 10 ಜನವರಿ 2026
Light
Dark

ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಪಾಲಿಟ್ರಾಮಾ ಕೇಂದ್ರ ಸ್ಥಾಪಿಸುವಂತೆ ಡಾ.ಸಿ.ಎನ್.ಮಂಜುನಾಥ್ ಮನವಿ

ಬೆಂಗಳೂರು: ಬೆಂಗಳೂರಿನ ನಿಮ್ಹಾನ್ಸ್‌ ಕ್ಯಾಂಪಸ್‌ನಲ್ಲಿ ಸುಮಾರು 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಬೇಕು ಎಂದು ಸಂಸದ ಡಾ.ಸಿಎನ್‌ ಮಂಜುನಾಥ್‌ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದ್ದಾರೆ.

ನಿಮ್ಹಾನ್ಸ್‌ ಆಸ್ಪತ್ರೆ ಆರಂಭವಾದಾಗ ಪ್ರತಿದಿನ 250 ರಿಂದ 300ರ ಹತ್ತಿರ ರೋಗಿಗಳು ಬರುತ್ತಿದ್ದರು. ಈಗ ಅದರ ಸಂಖ್ಯೆ 2500ಕ್ಕಿಂತಲೂ ಹೆಚ್ಚಾಗಿದೆ. ಆದ ಕಾರಣ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ದೇಶದಲ್ಲಿ ಸಾವುಗಳು ಹೆಚ್ಚಾಗಿ ಸಂಭವಿಸುವ ಅಪಘಾತಗಳಲ್ಲಿ ರಸ್ತೆ ಅಪಘಾತವು ಒಂದಾಗಿದೆ. ರಸ್ತೆ ಅಪಘಾತಗಳಿಂದ ಸಾವಿಗೀಡಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಾಗುತ್ತಿರುವ ಸಾವುಗಳಿಗೆ ರಸ್ತೆ ಅಪಘಾತ ದೇಶದ ಅತಿದೊಡ್ಡ ಐದನೇ ಕಾರಣವಾಗಿದೆ.

ಅಪಘಾತದಲ್ಲಿ ಗಾಯವಾದವರಿಗೆ ಗೋಲ್ಡನ್‌ ಅವರ್‌ನಲ್ಲಿ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸುವ ಅವಕಾಶ ಜಾಸ್ತಿಯಿರುತ್ತದೆ. ಈಗ ಪಾಲಿಟ್ರಾಮಾ ಕೇಂದ್ರವಿಲ್ಲದೆ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪಾಲಿಟ್ರಾಮಾ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರವು ಈಗಾಗಲೇ ಭೂಮಿ ಮಂಜೂರು ಮಾಡಿದೆ. ಹಲವು ಭಾರಿ ಪಾಲಿಟ್ರಾಮಾ ಕೇಂದ್ರದ ವಿನ್ಯಾಸ ಕುರಿತಂತೆ ನೀಡಿರುವ ಪ್ರಸ್ತಾಪವನ್ನೂ ಪರಿಷ್ಕರಿಸಲಾಗಿದೆ. ಇದಕ್ಕೆ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿದೆ ಎಂದು ಮನವರಿಕೆ ಮಾಡಿದರು.

ನನ್ನ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರು ತಿಳಿಸಿದರು.

Tags:
error: Content is protected !!