Mysore
31
broken clouds

Social Media

ಸೋಮವಾರ, 07 ಸೆಪ್ಟೆಂಬರ್ 2026
Light
Dark

ರಾಜ್ಯದಲ್ಲಿ ಕೈಕೊಟ್ಟ ಮುಂಗಾರು: ಸಂಕಷ್ಟದತ್ತ ಕೃಷಿ ವಲಯ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕೃಷಿ ವಲಯ ಮತ್ತೊಂದು ಗಂಭೀರ ಸಂಕಷ್ಟದತ್ತ ಸಾಗುತ್ತಿದೆ. ಸತತ ಮೂರು ವಾರಗಳಿಂದ 122 ತಾಲೂಕುಗಳಲ್ಲಿ ಗಮನಾರ್ಹ ಮಳೆಯಾಗದೆ, ಮಳೆಯ ಕೊರತೆ ಮುಂದುವರಿದರೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸುಮಾರು ಶೇ.50ರಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಪ್ರಾಥಮಿಕ ಅಂದಾಜು ಆತಂಕ ಮೂಡಿಸಿದೆ.

ಪ್ರಸ್ತುತ ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 24 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಿದ್ಧತೆ ನಡೆದಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ 180ರಿಂದ 200 ತಾಲೂಕುಗಳು ಬರಪೀಡಿತವಾಗುವ ಸಾಧ್ಯತೆ ಇದೆ.

ಕಳೆದ ಕೃಷಿ ಹಂಗಾಮಿನಲ್ಲಿ ರಾಜ್ಯದಲ್ಲಿ ಸುಮಾರು 82.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದ್ದರೆ, ಪ್ರಸಕ್ತ ಹಂಗಾಮಿನಲ್ಲಿ ಇದುವರೆಗೆ ಕೇವಲ 36.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ ಎಂಬ ಅಂಕಿ-ಅಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ.

ವಿಶೇಷವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕೃಷಿ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರಿದೆ.

ಉತ್ತರ ಕರ್ನಾಟಕದ ಹಾವೇರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿಯೂ ಬಿತ್ತನೆ ಪ್ರಮಾಣದಲ್ಲಿ ಕುಸಿತ ಕಂಡುಬರುತ್ತಿದೆ. ಮಳೆಯನ್ನೇ ಅವಲಂಬಿಸಿರುವ ಒಣಭೂಮಿ ರೈತರಿಗೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ.

 

Tags:
error: Content is protected !!