Mysore
23
broken clouds
Light
Dark

ಕೇರಳ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿವಾದ: ಅಮ್ಮ ಅಧ್ಯಕ್ಷ ಸ್ಥಾನಕ್ಕೆ ಮೋಹನ್‌ ಲಾಲ್‌ ರಾಜೀನಾಮೆ

ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ನಟರು ಹಾಗೂ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ ಲಾಲ್ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಅಮ್ಮ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಮಲಯಾಳಂ ಉದ್ಯಮದಲ್ಲಿ ಮಹಿಳಾ ವೃತ್ತಿಪರರಿಗೆ ಲೈಂಗಿಕ ಕಿರುಕುಳ ಮತ್ತು ನಿಂದನೆ ಬಗ್ಗೆ ನ್ಯಾಯಮೂರ್ತಿ ಕೆ.ಹೇಮಾ ಸಮಿತಿಯ ವರದಿ ಬೆಳಕು ಚೆಲ್ಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ.

ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಚಿತ್ರರಂಗದಲ್ಲಿ ಆಕ್ರೋಶದ ಕಟ್ಟೆ ಒಡೆದಿದ್ದು, ಆರೋಪದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕಾಗಿ ಒತ್ತಡ ಕೇಳಿಬಂದಿದೆ.

ಅಮ್ಮ ಆಡಳಿತ ಸಮಿತಿಯು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸಾಮಾಜಿಕ ದೃಶ್ಯ ಮುದ್ರಿತ ಮಾಧ್ಯಮಗಳಲ್ಲಿ ಅಮ್ಮ ಸಂಸ್ಥೆಯ ಆಡಳಿತ ಸಮಿತಿಯ ಕೆಲವು ಪದಾಧಿಕಾರಿಗಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅಮ್ಮ ಆಡಳಿತ ಸಮಿತಿ ನೈತಿಕ ಹೊಣೆಗಾರಿಕೆಯ ಆಧಾರದಲ್ಲಿ ರಾಜೀನಾಮೆ ನೀಡಿದೆ ಎಂದು ತಿಳಿಸಲಾಗಿದೆ.