ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸುವುದು ಹಾಗೂ ಟ್ರೋಲ್ ಮಾಡುವುದು ಖಂಡನೀಯ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಂಪುಟ ಸಹೋದ್ಯೋಗಿ, ಮಿತ್ರ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸುವುದು ಮತ್ತು ಅವರ ಕುಟುಂಬಸ್ಥರ ಮೇಲೆ ಅಸಭ್ಯವಾಗಿ ದಾಳಿ ನಡೆಸುತ್ತಿರುವುದು ಖಂಡನೀಯ. ಅವರ ಜೊತೆಗೆ ನಾವೆಲ್ಲರೂ ಇದ್ದೇವೆ. ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುವ, ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಯಾವುದೇ ಸಂಘಟನೆಗಳಿಗೆ ಸರ್ಕಾರಿ ಜಾಗ ಬಳಸಿಕೊಳ್ಳಲು ಅವಕಾಶ ಇರಬಾರದು.
ಇದನ್ನು ಓದಿ: ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಕರೆ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್
ಬಿಜೆಪಿ ಪರಿವಾರದವರು ಸಾರ್ವಜನಿಕ ವಾಗ್ವಾದದ ಮಟ್ಟವನ್ನು ಬಹಳ ಕೀಳುಮಟ್ಟಕ್ಕೆ ಇಳಿಸಿದ್ದಾರೆ. ಅದರ ಭಾಗವಾಗಿಯೇ ಪ್ರಿಯಾಂಕ್ ಖರ್ಗೆ ಅವರನ್ನು ಫೋನಿನ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕುವುದು, ನಿಂದಿಸುವುದು ಹಾಗೂ ಟ್ರೋಲ್ ಮಾಡುವುದು ಸಭ್ಯತೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.





