ಬನ್ನೇರುಘಟ್ಟ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಗಣರಾಜ್ಯದ ದಿನ ಹುಟ್ಟಿದ ಗಂಡು ಆನೆ ಮರಿಗೆ ʻಸ್ವರಾಜ್ʼ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ನಾಮಕರಣ ಮಾಡಿದರು.
ಉದ್ಯಾನವನದಲ್ಲಿರುವ ವೇದಾ ಎಂಬ ಹೆಣ್ಣಾನೆ ಕಳೆದ ಜನವರಿ 26ರ ಗಣರಾಜ್ಯ ದಿನದಂದು ಗಂಡಾನೆ ಮರಿಗೆ ಜನ್ಮ ನೀಡಿತು. ಹೀಗಾಗಿ ಈ ಆನೆಗೆ ಫಲಕ ಅನಾವರಣ ಮಾಡಿ ‘ಸ್ವರಾಜ್’ ಎಂದು ಸಚಿವ ಈಶ್ವರ್ ಖಂಡ್ರೆ ಹೆಸರಿಟ್ಟರು.
ಆನೆ ಹಾಲುಣಿಸುವ ಕೇಂದ್ರದ ಉದ್ಘಾಟನೆ
ಇದೇ ಸಂದರ್ಭ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಒಟ್ಟು 26 ಆನೆಗಳಿದ್ದು, ಇಲ್ಲಿ ವರ್ಷಕ್ಕೆ 2 ರಿಂದ 3 ಮರಿಗಳ ಜನನವಾಗುತ್ತದೆ. ಈ ಆನೆ ಮರಿಗಳಿಗೆ ಹಾಲುಣಿಸುವ ಕೇಂದ್ರವನ್ನೂ ಸಹ ಉದ್ಘಾಟಿಸಲಾಯಿತು.
ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಉದ್ಯಾನದಲ್ಲಿ ಜನಿಸುವ ಆನೆಮರಿಗಳ ಪೈಕಿ ಸುಮಾರು 3 ವರ್ಷದ ಮರಿಗಳನ್ನು ಹಾಲುಣಿಸಲು ತಾಯಿಯಿಂದ ಬೇರ್ಪಡಿಸಿ, ಮಾವುತರ ಜೊತೆ ಬಾಂಧವ್ಯ ಬೆಸೆಯಲು 10 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿರುವ ಹಾಲುಣಿಸುವ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ, ಅಲ್ಲಿ ಮಾವುತರು ಮತ್ತು ಕಾವಾಡಿಗಳು ಆನೆ ಮರಿಗಳಿಗೆ 24 ಗಂಟೆಯೂ ವಿಶೇಷ ಆರೈಕೆ ಮಾಡುತ್ತಾರೆ ಎಂದು ತಿಳಿಸಿದರು.




