ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬಂದ ಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಮೀಟರ್ ಬಡ್ಡಿ ಮಾಫಿಯಾ ಹೆಚ್ಚುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಟರ್ ಬಡ್ಡಿಯಿಂದಾಗಿ ಸುಮಾರು 14 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೂಂಡಾಗಳಿಗೆ ಕೆಲಸ ಇರಲಿಲ್ಲ. ಈ ಸರ್ಕಾರ ಬಂದಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಿದೆ. ಗೂಂಡಾಗಳ ಮೂಲಕ ಕಿರುಕುಳ ಕೊಟ್ಟು ಸಾಲ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆತ್ಮಹತ್ಯೆಗಳು ಸೀರಿಯಲ್‌ನಂತಾಗಿವೆ. ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸರಣಿಯಾಯ್ತ. ಗುತ್ತಿಗೆದಾರರ ಆತ್ಮಹತ್ಯೆ ಆಯ್ತು. ಬಾಣಂತಿಯರ ಸಾವು ಕೂಡ ಹೆಚ್ಚಾಯ್ತು. ಈಗ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾಮಾನ್ಯ ಜನರ ಆತ್ಮಹತ್ಯೆಗಳು ನಡೆಯುತ್ತಿವೆ. ಇದೊಂತರ ಸೀರಿಯಲ್ ತರ ಆಗೋಗಿದೆ ಎಂದು ಗರಂ ಆದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಪೊಲೀಸರು ಕೂಡ ಮೈಕ್ರೋ ಫೈನಾನ್ಸ್‌ಗೆ ಸಹಾಯ ಮಾಡುತ್ತಿದ್ದಾರಂತೆ. ಈ ಬಗ್ಗೆ ಜನರೇ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.