ಬೆಂಗಳೂರು : ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿಯವರು ಸೂಚನೆ ನೀಡಿದ್ದಾರೆ.
ವಿಕಾಸಸೌಧ ಕಚೇರಿಯಲ್ಲಿಂದು ಕೃಷಿ ಹಾಗೂ ಜಲಾನಯನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕೃಷಿ ಸಚಿವರು, ಮುಂಗಾರು, ಹಾಗೂ ಹಿಂಗಾರಿನಲ್ಲಿ ಬಿತ್ತನೆಯಲ್ಲಿ ಶೇ 100% ಪ್ರಗತಿ ಸಾಧಿಸಿದ್ದು, ಕೃಷಿ ಭಾಗ್ಯ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.
ಶೇಕಡಾ 80 ರಷ್ಟು ಕಾಮಗಾರಿ ಕಟ್ಟಡಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಸಚಿವರು, ಈಗಾಗಲೇ ಖರ್ಚಾಗಿರುವ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ನೀಡಿ ಉಳಿಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.
ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ಹಾಗೂ ವಿಶ್ವವಿದ್ಯಾನಿಲಯಗಳ ಹಲವು ಕಟ್ಟಡ ಕಾಮಗಾರಿಗಳನ್ನು RIDF ಅನುದಾನದಲ್ಲಿ ಕೈಗೊಳ್ಳಲಾಗುತ್ತಿದ್ದು ಪ್ರತಿ ಕಟ್ಟಡವಾರು ಪ್ರಗತಿ ಬಗ್ಗೆ ಸಚಿವರು ವಿಸ್ತೃತವಾಗಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ , ಜವಾಬ್ದಾರಿಯುತವಾಗಿ ಕೆಲಸಮಾಡಿ ಎಂದು ಕೃಷಿ ಸಚಿವರು ಸೂಚಿಸಿದರು.
ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹೊಸ ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನಗ ಬಗ್ಗೆ ಅರಿವು ಮೂಡಿಸಿ, ಕೃಷಿ ಜಮೀನುಗಳಿಗೆ ಅವುಗಳನ್ನು ವರ್ಗಾವಣೆ ಮಾಡಿ ಎಂದು ಸಚಿವರು ತಿಳಿಸಿದರು.
ಬೆಳೆ ವಿಮೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ , ನೊಂದಣಿ ಜಾಸ್ತಿ ಮಾಡಿ , ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೆ ನೆರವಾಗುವತ್ತಲೂ ಗಮನ ಹರಿಸಿ.ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿ ಎಂದು ಸಚಿವ ಎನ್ ಚಲುವರಾಯಸ್ವಾಮಿ ಸಲಹೆ ನೀಡಿದರು.
ಹೈಟೆಕ್ ಹಾರ್ವೆಸ್ಟ್ ಹಬ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಇದರಿಂದಾಗುವ ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿ ಎಂದು ಅವರು ಹೇಳಿದರು..
ಯಾಂತ್ರೀಕರಣ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು, ಹೊಸ ತಳಿಗಳ ಪ್ರಯೋಜನದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಹಾಗೂ ಹಾರ್ವೇಸ್ಟರ್ ಹಬ್ ಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಮಣ್ಣಿನ ಪರೀಕ್ಷೆ ಅತ್ಯಂತ ಮುಖ್ಯವಾದದ್ದು, ಇದನ್ನು ಹೆಚ್ಚಾಗಿ ಅನುಷ್ಠಾನ ಮಾಡಿ ರಾಸಾಯನಿಕಗಳ ಹಾಗೂ ಅದರ ಅನಾನೂಕೂಲಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಅವರು ಸೂಚಿಸಿದರು.
ಬೆಳೆ ವಿಮೆ ನೊಂದಣಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಬೆಳೆ ವಿಮೆ ಹಣ ಪಾವತಿಯಲ್ಲಿನ ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು..
ಎಲ್ಲಾ ಅಧಿಕಾರಿಗಳು ರೈತರ ಬಳಿ ಹೋಗಿ ಸಮಸ್ಯೆ ಆಲಿಸಬೇಕು, ಕೃಷಿಕರ ಜಮೀನುಗಳಿಗೆ ಭೇಟಿ ನೀಡದ ,ಅವರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ.ಸಿಂಗ್, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು..




