ಬೆಂಗಳೂರು: ರಾಜ್ಯದಲ್ಲಿನ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಎಂಎಲ್‌ಸಿ ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ಅನೇಕ ಪೌರಕಾರ್ಮಿಕರು ಇಂದು ಸಂಕಷ್ಟದಲ್ಲಿದ್ದಾರೆ. ನೇಮಕಾತಿ ವಿಚಾರ ಬಂದಾಗ ಪ್ರತಿ ಬಾರಿಯೂ ಆರ್ಥಿಕ ಇಲಾಖೆಯಲ್ಲಿ ಕಡತ ಇದೆ ಎಂಬ ಉತ್ತರ ಕೇಳಿಬರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 664 ಮಂದಿ ಪೌರಕಾರ್ಮಿಕರು ಒಳಚರಂಡಿಯ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ವಾಸ್ತವದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ನಾಗರಿಕತೆ ಇಷ್ಟು ಬೆಳೆದಿದ್ದರೂ ಕಳೆದ ಏಳು ವರ್ಷಗಳಲ್ಲಿ 85 ಪೌರಕಾರ್ಮಿಕರು ಒಳಚರಂಡಿಯನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿರುವುದು ದುರಂತ ಎಂದು ಹೇಳಿದರು.





