ಉಡುಪಿ : ನಿಗೂಢವಾಗಿ ಕಣ್ಮರೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸೌಜನ್ಯ ಭಟ್ ಪರ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬ್ರಹ್ಮಾವರ ಸ್ಥಳೀಯ ನ್ಯಾಯಾಲಯ ಒಪ್ಪಿಸಿ ಆದೇಶ ನೀಡಿದೆ.
ಬಂಧನದ ಬಳಿಕ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಿ ನಂತರ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ನಡೆಸಿದ ಬ್ರಹ್ಮಾವರತಾಲೂಕು ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಣೆ ಮಾಡಿ ಆದೇಶಿಸಿದೆ.
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯ ವಿಚಾರಣೆ ನಡೆಸಿದ ಬ್ರಹ್ಮಾವರ ತಾಲೂಕು ನ್ಯಾಯಾಲಯ, ಜಾಮೀನು ಅರ್ಜಿ ತಿರಸ್ಕರಿಸಿತು. ಮಾತ್ರವಲ್ಲ, ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ. ಸದ್ಯ, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಅವರನ್ನು ಹಿರಿಯಡ್ಕ ಜೈಲ್‌ಗೆ ಕಳುಹಿಸಲಾಗಿದೆ.
ತಿಮರೋಡಿಯವರ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಭಾರತೀಯ ಕಾನೂನು ಸಂಹಿತೆಯ (BNS) ಸೆಕ್ಷನ್ 196(1), 352, ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಉಡುಪಿಯ ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ನಿವಾಸದಿಂದ ತಿಮರೋಡಿಯನ್ನು ಬಂದಿಸಿದ್ದರು.
ಮಧ್ಯಾಹ್ನ ವೈದ್ಯಕೀಯ ಪರೀಕ್ಷೆ ನಡೆಸಿ ಬ್ರಹ್ಮಾವರ ತಾಲೂಕು ಕೋರ್ಟ್‌ಗೆ ಹಾಜರು ಪಡಿಸಿದರು. ಈ ಸಂದರ್ಭದಲ್ಲಿ ತಿಮರೋಡಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಮಹೇಶ್ ಶೆಟ್ಟಿಯ ಜಾಮೀನು ಅರ್ಜಿಯ ವಿಚಾರಣೆ ಅಗಸ್ಟ್ 23ಕ್ಕೆ ನಡೆಯಲಿದೆ.
ತಿಮರೋಡಿ ವಕೀಲ ವಿಜಯವಾಸು ಪೂಜಾರಿ ಪ್ರತಿಕ್ರಿಯಿಸಿ, ತಿಮರೋಡಿಯವರ ಹೇಳಿಕೆಯನ್ನ ಪೊಲೀಸರು ದಾಖಲು ಮಾಡಿದ್ದಾರೆ. ತಿಮರೋಡಿ ಅವರು ಬಿಪಿ ಸಮಸ್ಯೆಯಿಂದ ಬಳಲ್ತಿದ್ದಾರೆ. ಹೈ ಬಿಪಿಗೆ ವೈದ್ಯರು ಮಾತ್ರೆ ನೀಡಿದ್ದರು. ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶವನ್ನು ಕೋರ್ಟ್‌ನಲ್ಲಿ ಉಲ್ಲೇಖಿಸಲಾಯ್ತು. ಈ ಸೆಕ್ಷನ್‌ನಲ್ಲಿ ಏಳು ವರ್ಷದವರೆಗೆ ಮಾತ್ರ ಶಿಕ್ಷೆಯಿದೆ. ಜಾಮೀನು ರಹಿತಿ ಸೆಕ್ಷನ್‌ನಲ್ಲಿ ಕೇಸ್ ದಾಖಲಾಗಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ತಿಳಿಸಿದರು.
ಸೋಮವಾರ ಇನ್ನೊಂದು ಬಾರಿ ವಿಚಾರಣೆ ನಡೆಯಲಿದೆ. ಬಿ ಎಲ್ ಸಂತೋಷ್ ಅವರು ಎಲ್ಲಿಯೂ ಪ್ರಕರಣವನ್ನು ದಾಖಲು ಮಾಡಿಲ್ಲ. ಆ.16 ರಂದು ವಿಡಿಯೋ ವೈರಲ್ ಆಗಿದ್ದರೂ ಇಲ್ಲಿಯವರೆಗೆ ಈವರೆಗೂ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಕದಡುವ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.
ದೂರಿನಲ್ಲಿ ಎರಡು ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಎರಡು ಸೆಕ್ಷನ್ ನಲ್ಲಿ ಮೂರು ವರ್ಷ ಶಿಕ್ಷೆ ಮತ್ತು ದಂಡ ಇರುತ್ತದೆ. ಸೋಮವಾರ ನೂರಕ್ಕೆ ನೂರು ತಿಮರೋಡಿಗೆ ಜಾಮೀನು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಕರಣದ ಹಿನ್ನಲೆ
ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ಉಡುಪಿಯ ಬಿಜೆಪಿ ಮುಖಂಡರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಎರಡು ಬಾರಿ ನೋಟಿಸ್ ನೀಡಿದರೂ ಉತ್ತರಿಸಿದ ಕಾರಣ ಗುರುವಾರ ಮಹೇಶ್ ತಿಮರೋಡಿ ಅವರನ್ನು ಉಜಿರೆಯಿಂದ ವಶಕ್ಕೆ ಪಡೆಯಲಾಗಿತ್ತು.
ತಿಮರೋಡಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಸರಿಯಾದ ಉತ್ತರ ನೀಡದೆ ಇರುವುದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹರಿರಾಮ್ ಶಂಕರ್ ತಿಳಿಸಿದ್ದಾರೆ.
ನಿಷೇಧಾಜ್ಞೆ ಜಾರಿ
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆಯನ್ನು 21/08/2025 ರಂದು ಅಪರಾಹ್ನ 1 ಗಂಟೆಯಿಂದ 22/08/2025ರ ಅಪರಾಹ್ನ 1ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಅಧೀಕ್ಷಕರ ಮನವಿಯಂತೆ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅವರು ಈ ಆದೇಶ ಹೊರಡಿಸಿದ್ದಾರೆ.
ಹೈಡ್ರಾಮಾ
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ ಸಮಯದಲ್ಲಿ ಉಜಿರೆಯ ನಿವಾಸದ ಬಳಿ ಹೈಡ್ರಮಾ ನಡೆಯಿತು. ಕೊನೆಗೆ ಪೊಲೀಸರ ಜೊತೆ ತಿಮರೋಡಿ ತಮ್ಮ ಖಾಸಗಿ ವಾಹನದಲ್ಲಿ ತೆರಳಿದ್ದರು.





