ಬೆಂಗಳೂರು: ಭಾರತೀಯ ಜನತಾ ಪಕ್ಷವು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಅದರೊಳಗೇನಿದೆ ಎಂದು ಇಣುಕಿದರೆ ದೊಡ್ಡ ಚೊಂಬು ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಸಿದ್ದರಾಮಯ್ಯ ಕಳೆದ ಬಾರಿಯ ಬಿಜೆಪಿ ಪ್ರಣಾಳಿಕೆಯಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ ಎನ್ನುವ ಲೆಕ್ಕಚಾರವನ್ನು ದೇಶದ ಜನತೆಯ ಮುಂದಿಡಿ ಮೋದಿ ಅವರೇ ಎಂದು ಸವಾಲು ಹಾಕಿದ್ದಾರೆ.
ಮೋದಿ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದ ಸಿದ್ದರಾಮಯ್ಯ, ನಾನು ನುಡಿದಂತೆ ನಡೆದವನು. ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮಾಡಿದ ಕೆಲಸದ ಲೆಕ್ಕವನ್ನು ಜನರ ಮುಂದೆ ಇಟ್ಟಿದ್ದೆ. ಈ ಬಾರಿಯೂ ಈ ಕೆಲಸ ಮುಂದುವರೆಸುತ್ತಿದ್ದೇನೆ. ಈ ಕಾರಣಕ್ಕೆ ನರೇಂದ್ರ ಮೋದಿಯವರಲ್ಲಿ ಲೆಕ್ಕ ಕೇಳುವ ನೈತಿಕ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.
ಜುಮ್ಲಾ(ಮೋದಿ ಸುಳ್ಳು ಭರವಸೆ)1 ಎಂದು ಸರಣಿಗಳನ್ನು ಆರಂಭಿಸಿ ಬಿಜೆಪಿ ಪ್ರಣಾಳಿಕೆಗಳು ಎಷ್ಟು ಸುಳ್ಳಿನಿಂದ ಕೂಡಿದೆ ಎಂದು ಎಳೆ ಎಳೆಯಾಗಿ ಬರೆದುಕೊಂಡಿದ್ದಾರೆ.





