ಬೆಂಗಳೂರು: ಶುಕ್ರವಾರ (ಏ.26 ) ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಮೊದಲ ಹಂತದ ಮತದಾನ ನಡೆದಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ ನಡೆದಿದೆ, ಯಾವುದೇ ತರಹದ ಅಹಿತಕರ ಘಟನೆ ನಡೆದಿಲ್ಲ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಜಿತೇಂದ್ರ ತಿಳಿಸಿದ್ದಾರೆ.
ಈ ಕುರಿತು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ಕೆಲವು ಕಡೆ ಇವಿಎಂ ಟೆಕ್ನಿಕಲ್ ಸಮಸ್ಯೆ ಕಂಡುಬಂತು, ಕೆಲಗಂಟೆ ಮತದಾನ ಸ್ಥಗಿತವಾಗಿತ್ತು, ಉಳಿದಂತೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರಿನ ಇಂಡಿಗನತ್ತ ಮತಗಟ್ಟೆಯಲ್ಲಿ ಇವಿಎಂ ಧ್ವಂಸಗೊಳಿಸಲಾಗಿದೆ. ಜೊತೆಗೆ ಮತದಾನ ಬಹಿಷ್ಕಾರಕ್ಕೆ ಗಲಾಟೆಗಳಾಗಿವೆ. ಗ್ರಾಮಕ್ಕೆ ಹೆಚ್ಚುವರಿ ಭದ್ರತೆ ನೀಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂದಿನ ಪ್ರಕ್ರಿಯೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು.
ರಾಜ್ಯದ 14 ಕ್ಷೇತ್ರಗಳಲ್ಲಿ 75 ಸಿಆರ್ ಪಿಎಫ್, 35 ಸಾವಿರ ಪೊಲೀಸರು, 17 ಸಾವಿರ ಹೋಮ್ ಗಾರ್ಡ್ಸ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮತದಾನ ಮುಗಿದ ಬಳಿಕ ಎಲ್ಲಾ ಕ್ಷೇತ್ರಗಳ ಇವಿಎಂಗಳು ಮಸ್ಟರಿಂಗ್ ಕೇಂದ್ರದಲ್ಲಿ ಭದ್ರವಾಗಿದ್ದು, ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಇವಿಎಂಗಳು ಭದ್ರವಾಗಿವೆ ಎಂದು ಮಾಹಿತಿ ನೀಡಿದರು.





