ಹುಬ್ಬಳ್ಳಿ : ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಯುವ, ಹೊಸ ಮುಖಗಳು, ಜನರಿಗೆ ಪರಿಚಿತರು ಹಾಗೂ ಉತ್ತಮ ವಾಕ್ಚಾತುರ್ಯ ಹೊಂದಿರುವವರು ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾಗುವ ಉಜ್ವಲ ಅವಕಾಶವಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ. ನಮ್ಮ ಎಲ್ಲ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿದ್ದೇವೆ ಎಂದರು.
ಈಗಿನಿಂದಲೇ ಅವರು ವರದಿಯನ್ನು (ಸಂಭಾವ್ಯ ಅಭ್ಯರ್ಥಿಗಳ ಮೇಲೆ) ಒದಗಿಸಬೇಕು. 75ರಷ್ಟು ಮಂದಿ ತಮಗೆ ಗೊತ್ತುಪಡಿಸಿದ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ದೆಹಲಿಯ ಹಿರಿಯರು ಕೆಲವು ಮಾರ್ಗದರ್ಶನ ನೀಡಿದ್ದಾರೆ. ಹೊಸ ಮುಖ, ಯುವಕರು, ಜನರಿಗೆ ಪರಿಚಿತರು, ಉತ್ತಮ ವಾಕ್ಚಾತುರ್ಯ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಕೆಲವು ಅರ್ಹತೆಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.