Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪ್ರಧಾನಿ ಮೋದಿ ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದಲಿ: ಪ್ರಿಯಾಂಕ್ ಖರ್ಗೆ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದಬೇಕು ಎಂದು ಸಲಹೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ‘ಪ್ರಧಾನಿಯವರು ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದಬೇಕು. ನಮ್ಮ ಮುಖ್ಯಮಂತ್ರಿ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂಬ ಬಗ್ಗೆ ಅವರಿಗೆ ಅನುಮಾನವಿರುವ ಬಗ್ಗೆ ನಾನು ಕೇಳಿದ್ದೇನೆ. ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸಾಮಾನ್ಯ ಜ್ಞಾನವನ್ನು ನಿಜವಾಗಿಯೂ ಹೆಚ್ಚಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಬಿಜೆಪಿ ಅಧಿಕಾರಾವಧಿಯಲ್ಲಿ ಅವರು ಎಂಟು ವರ್ಷಗಳ ಎರಡು ಅವಧಿಯಲ್ಲಿ ಐದು ಮುಖ್ಯಮಂತ್ರಿಗಳನ್ನು ನಮಗೆ ನೀಡಿದ್ದಾರೆ’ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿನ ಕಾರ್ಯವೈಖರಿ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಆ ಸರ್ಕಾರವನ್ನು ’40 ಪರ್ಸೆಂಟ್ ಸರ್ಕಾರ’ ಎಂದು ಪತ್ರಿಕೆಗಳು ಕರೆಯುತ್ತವೆ ಎಂದು ಹೇಳಿದರು.

‘ಅವರ (ಮೋದಿ) ಸರ್ಕಾರವನ್ನು ಕರ್ನಾಟಕದಿಂದ ಹೊರಹಾಕಲಾಗಿದೆ ಮತ್ತು ಜನರು ಕಳೆದ 35-40 ವರ್ಷಗಳಲ್ಲಿಯೇ 136 ಸ್ಥಾನಗಳ ಅತಿದೊಡ್ಡ ಜನಾದೇಶವನ್ನು ನಮಗೆ ನೀಡಿದ್ದಾರೆ. ಅವರ ಸರ್ಕಾರವನ್ನು ಪತ್ರಿಕೆಗಳು 40 ಪರ್ಸೆಂಟ್ ಸರ್ಕಾರ ಎಂದು ಕರೆದು ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದವು. ಅದುವೇ ಕರ್ನಾಟಕದಲ್ಲಿ ಬಿಜೆಪಿಯ ಪರಂಪರೆಯಾಗಿದೆ’ ವಾಗ್ದಾಳಿ ನಡೆಸಿದರು.

‘ಮೋದಿಯವರು ಈ ಎಲ್ಲದರ ಬಗ್ಗೆ ರಾಜಕೀಯವಾಗಿ ಮಾತನಾಡಲು ಬಯಸಿದರೆ, ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ಅದಕ್ಕೂ ಮುನ್ನ ಅವರು ಕರ್ನಾಟಕ ರಾಜಕೀಯದ ಬಗ್ಗೆ ತಮ್ಮ ಸಾಮಾನ್ಯ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಂಡು ನಮ್ಮ ಬಳಿಗೆ ಬರಲಿ… ಪ್ರಧಾನಿ ಯಾವಾಗಲೂ ಸ್ವಗತವನ್ನು (ತನಗೆ ತಾನೇ ಮಾತನಾಡಿಕೊಳ್ಳುವುದು) ಇಷ್ಟಪಡುತ್ತಾರೆ. ಸಂವಾದಕ್ಕೆ ದಿನ ಸಿದ್ಧವಾಗಿದೆ, ಚರ್ಚೆ ನಡೆಸಬಹುದು’ ಎಂದು ಸಲಹೆ ನೀಡಿದರು.

‘ಕರ್ನಾಟಕದ ಮುಖ್ಯಮಂತ್ರಿ ಅಧಿಕಾರವಧಿ ಬಗ್ಗೆ ಪ್ರಧಾನ ಮಂತ್ರಿಗೆ ಏಕೆ ತಿಳಿಯಬೇಕು, ಅದು ನಮ್ಮ ಪಕ್ಷದ ಆಂತರಿಕ ವಿಷಯ’ ಎಂದು ತಿರುಗೇಟು ನೀಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಜ್ಯ ಸರ್ಕಾರದ ಉನ್ನತ ಹುದ್ದೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಅಧಿಕಾರದ ಪೈಪೋಟಿ ನಡೆದಿತ್ತು.

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತು ಮಾತನಾಡಿದ ಅವರು, ನಾವು ಸುಸ್ಥಿತಿಯಲ್ಲಿದ್ದೇವೆ ಎಂಬುದು ನಮಗೆ ಖಚಿತವಾಗಿದೆ. ಕೇಂದ್ರದ ಬಿಜೆಪಿಯ ವಿಫಲ ಆರ್ಥಿಕ ನೀತಿಗಳು ಬಹಿರಂಗಗೊಂಡಿದ್ದು, ಐದು ರಾಜ್ಯಗಳಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಕರ್ನಾಟಕವನ್ನು ಹಾಳು ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಹೇಳಿದ್ದರು. ಅಲ್ಲದೇ ತಾನೆಷ್ಟು ದಿನ ಸಿಎಂ ಎಂಬುದು ಸಿದ್ದುಗೇ ಗೊತ್ತಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಇರುವ ಕಡೆಗಳಲ್ಲಿ  ಭ್ರಷ್ಟಾಚಾರ, ಆಂತರಿಕ ಕಚ್ಚಾಟ ಮತ್ತು  ರಾಜ್ಯಗಳನ್ನು ಹಾಳು ಮಾಡುತ್ತಿದೆ . ಆ ರಾಜ್ಯಗಳಲ್ಲಿ ಮುಖ್ಯಮಂತ್ರಿ ಮತ್ತು ಅವರ ಉಪ ಮುಖ್ಯಮಂತ್ರಿಗಳ ನಡುವೆ ಲೂಟಿಗಾಗಿ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದರು. ಇಂತಹ ಹೇಳಿಕೆ ಸುಳ್ಳಿನ ರಾಜಕೀಯ ಮತ್ತು ಚುನಾವಣಾ ಭಾಷಣ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ