ಬೆಂಗಳೂರು: ರಾಜ್ಯ ವಿಧಾನಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ನಾಳೆಯಿಂದ ಆಗಸ್ಟ್.22ರವರೆಗೆ ಅಧಿವೇಶನ ನಡೆಯಲಿದುದ, 24ಕ್ಕೂ ಹೆಚ್ಚು ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆಯಿದೆ.
ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಕಾರ್ಯತಂತ್ರ ರೂಪಿಸಿದ್ದು, ಇದೆಲ್ಲವನ್ನು ಎದುರಿಸಲು ಆಡಳಿತ ಪಕ್ಷ ಕೂಡ ತಯಾರಿ ನಡೆಸಿದೆ. ಆರರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ರಸಗೊಬ್ಬರದ ಅಭಾವ, ಒಳ ಮೀಸಲಾತಿ, ಮತಗಳ್ಳತನದ ಆರೋಪ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಪ್ರತಿಧ್ವನಿಸಲಿವೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಸದನ ಆರಂಬವಾಗಲಿದ್ದು, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿತ್ತು. ಈ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು. ಈ ಕುರಿತಾದ ಸ್ಥಿರೀಕರಣ ಪ್ರಸ್ತಾವ ಮೊದಲ ದಿನವೇ ಮಂಡನೆಯಾಗಲಿದ್ದು, ವಿಧಾನಸಭೆ ಅನುಮೋದನೆ ನೀಡಬೇಕಿದೆ.
ಉಳಿದಂತೆ ಪ್ರಶ್ನೋತ್ತರ ಗಮನ ಸೆಳೆಯುವ ಸೂಚನೆಗಳು, ಕಾಗದ ಪತ್ರಗಳ ಮಂಡನೆ ಸೇರಿದಂತೆ ಸರ್ಕಾರದ ಅಧಿಕೃತ ಕಾರ್ಯಕಲಾಪಗಳು ಜರುಗಲಿವೆ.





