ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಬಹಳ ಚೆನ್ನಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊಲೆಗಳು, ಬ್ಯಾಂಕ್ ದರೋಡೆಗಳು ಆಗುತ್ತಿವೆ. ಈ ಪ್ರಕರಣಗಳು ನಡೆಯುವಾಗ ಅಲ್ಲಿರುವ ಲೋಪಗಳನ್ನು ನಾವು ಗಮನಿಸಬೇಕು ಎಂದರು.
ಇನ್ನು ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬುವ ವಾಹನದಲ್ಲಿ ಆವತ್ತು ಆರ್ಮ್ಡ್ ಗಾರ್ಡ್ ಇರಲಿಲ್ಲ. ಹಾಗಾಗಿ ಈ ರೀತಿ ಘಟನೆ ಸಂಭವಿಸಿದೆ. ಬ್ಯಾಂಕ್ ದರೋಡೆ ವೇಳೆ ಬ್ಯಾಂಕ್ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳೋದು ಸರಿಯಲ್ಲ ಎಂದು ಹೇಳಿದರು.
ಇನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲೆಲ್ಲಿ ಇಂತಹ ಘಟನೆಗಳಾಗಿವೆ ಎಂದು ನಾನು ಅಂಕಿ-ಅಂಶ ಕೊಡುತ್ತೇನೆ. ಅವರ ಆಡಳಿತದ ಅವಧಿಯಲ್ಲಿ ಆಗಿರುವ ಘಟನೆಗಳನ್ನು ಮರೆತು ಬಿಟ್ಟಿದ್ದಾರೆ ಅನ್ನಿಸುತ್ತಿದೆ. ಅವರ ಕಾಲದಲ್ಲಿ ಎಷ್ಟು ಕೊಲೆಗಳಾಗಿದ್ದವು. ಎಷ್ಟು ರೇಪ್ ಆಗಿದ್ದವು ಎಂದು ವಿವರಣೆ ಕೊಡುತ್ತೇನೆ. ಇದೆಲ್ಲವೂ ರಾಜ್ಯದ ಜನತೆಗೆ ಗೊತ್ತಾಗಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.