Mysore
25
scattered clouds
Light
Dark

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು

ಭೋಪಾಲ್:‌ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚೀತಾಗಳ ಸಾವಿನ ಸರಣಿ ಮುಂದುವರಿದಿದೆ.

ನಿನ್ನೆ ಬೆಳಿಗ್ಗೆ ಕೂಡ ಗಂಡು ಚೀತಾ ಪವನ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರೊಂದಿಗೆ ಮಾರ್ಚ್‌ 2023ರಿಂದ ಸಾವನ್ನಪ್ಪಿದ ಎಂಟನೇ ಆಫ್ರಿಕನ್‌ ಚಿರತೆಯಾಗಿದೆ.

ರಾಜ್ಯ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ ನಿನ್ನೆ ಬೆಳಿಗ್ಗೆ ನಮೀಬಿಯಾದ ಗಂಡು ಚಿರತೆ ಯಾವುದೇ ಚಲನವಲನವಿಲ್ಲದೇ ಪೊದೆಗಳ ನಡುವೆ ನಾಲಾ ಅಂಚಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಭಾರೀ ಮಳೆಯಿಂದ ನಾಲೆ ತುಂಬಿ ಹರಿಯುತ್ತಿತ್ತು.

ತಕ್ಷಣ ಪಶುವೈದ್ಯರಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ತಲೆ ಸೇರಿದಂತೆ ದೇಹದ ಮುಂಭಾಗದ ಅರ್ಧ ಭಾಗವು ನೀರಿನೊಳಗೆ ಇರುವುದು ಕಂಡುಬಂದಿದೆ. ದೇಹದ ಮೇಲೆ ಎಲ್ಲಿಯೂ ಗಾಯಗಳು ಕಂಡುಬಂದಿಲ್ಲ. ಹೀಗಾಗಿ ಚೀತಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.