ಬೆಂಗಳೂರು: ಬಿಜೆಪಿ ನಾಯಕ ಕುಮಾರ ಬಂಗಾರಪ್ಪ ಅವರ ಮನೆಗೆ ನಟ ಶಿವರಾಜ್‌ಕುಮಾರ್ ಅಭಿಮಾನಿಗಳು ಇಂದು(ಜೂ.8) ಮುತ್ತಿಗೆ ಹಾಕಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜ್‌ಕುಮಾರ್ ಅವರು ಸೋತ ಬೆನ್ನಲ್ಲೇ ಬಿಜೆಪಿಯ ಕುಮಾರ್ ಬಂಗಾರಪ್ಪ ನಟ ಶಿವರಾಜ್‌ಕುಮಾರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಈ ಬಗ್ಗೆ ಶಿವಣ್ಣ ಅಭಿಮಾನಿಗಳು ರೊಚ್ಚಿಗೆದ್ದು, ಕುಮಾರ್ ಬಂಗಾರಪ್ಪ ಅವರು ಬೆಂಗಳೂರಿನ ಸದಾಶಿವನಗರ ಮನಗೆ ಮುತ್ತಿಗೆ ಹಾಕಿ, ಕುಮಾರ್ ಬಂಗಾರಪ್ಪ ಅವರ ಮಾತಿನಿಂದ ನಮಗೆ ನೋವಾಗಿದೆ ಅವರನ್ನು ಹೊರಗೆ ಕರೆಯಿಸಿ ಕ್ಷೇಮೆ ಕೇಳುವಂತೆ ಆಗ್ರಹಿಸಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಸದ ಬಿವೈ ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಮತ್ತು ಬಂಡಾಯ ಸ್ಪರ್ಧಿಯಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸಿ, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಬಿವೈ ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿದ್ದರು. ಗೆಲುವಿನ ನಂತರ ಕುಮಾರ್ ಬಂಗಾರಪ್ಪ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲಘುವಾಗಿ ಪೋಸ್ಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಶಿವಣ್ಣ ಅಭಿಮಾನಿಗಳು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರ ಮನೆಗೆ ಮುತ್ತಿಗೆ ಹಾಕಿದ್ದಾರೆ.