ಉಡುಪಿ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಸೇರಿ ಇಬ್ಬರು ಯುವಕರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆರೋಪಿ ಕೃತ್ಯ ಎಸಗಿದ್ದ ಬಳಿಕ ಆತನ ಕಾರಿನಲ್ಲಿ ಸಂತ್ರಸ್ತ ಯುವತಿಯನ್ನು ಆಕೆಯ ಮನೆ ಬಳಿ ಬಿಟ್ಟು ಹೋಗಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಯುವತಿಯನ್ನು ಕಾರ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ವರ್ಗಾಹಿಸಲಾಗಿದೆ. ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಸಂತ್ರಸ್ತ ಯುವತಿಗೆ ಆರೋಪಿ ಅಲ್ತಾಫ್ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದನು. ಈ ನಡುವೆ ನಿನ್ನೆ ಅಲ್ತಾಫ್ ಯುವತಿಯನ್ನು ಪುಸಲಾಯಿಸಿ ಒಂದು ಕಡೆ ಬರಲು ತಿಳಿಸಿದ್ದನು. ಅದರಂತೆ ಅಲ್ಲಿಗೆ ಹೋದ ಸಂತ್ರಸ್ತೆಯನ್ನು ಆರೋಪಿ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರದೊಯ್ಯಲಾಗಿದೆ. ಅಲ್ಲಿ ಆರೋಪಿ ಅಲ್ತಾಫ್ ಡ್ರಿಂಕ್ಸ್‌ನಲ್ಲಿ ಮತ್ತು ಬರಿಸುವ ಪದಾರ್ಥವನ್ನು ಬೆರೆಸಿ ಕೊಟ್ಟು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.





