ಲಕ್ನೋ: ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕು ಎಂಬ ಆಸೆ ಇದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ.ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ವಾರಣಾಸಿಯಲ್ಲಿ ಕಾವೇರಿ ಆರತಿ ತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ಭಿನ್ನ ಅನುಭವವಾಗಿದೆ.
ಹರಿದ್ವಾರದಲ್ಲಿ ನೂರಕ್ಕೂ ಅಧಿಕ ವರ್ಷದ ಅನುಭವ ಇದೆ. ವಾರಣಾಸಿಯಲ್ಲಿ 35 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಗಂಗಾನದಿಯಂತೆ ಕಾವೇರಿ ಕೂಡ ಅತಿ ಮುಖ್ಯವಾದ ನದಿಯಾಗಿದೆ.
ಈ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಬಂದು ಜನರು ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ಅದು ನಿಯಂತ್ರಣಕ್ಕೆ ಬರಲಿ ಎಂದು ಆರತಿ ಶುರು ಮಾಡಿದ ಪ್ರತೀತಿ ಇದೆ.
ರಾಜ್ಯದಲ್ಲಿ ಸಕಾಲಕ್ಕೆ ಒಳ್ಳೆಯ ಮಳೆಯಾಗಲಿ. ನದಿ ಸಮಸ್ಯೆ ಇತ್ಯರ್ಥವಾಗಲಿ ಎಂದು ನಾವು ಕಾವೇರಿ ಆರತಿ ಶುರು ಮಾಡಲಿದ್ದೇವೆ ಎಂದರು.
ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಮಾಡುತ್ತೇವೆ. ಒಮ್ಮೆ ಶುರು ಮಾಡಿದ ಮೇಲೆ ನಿಲ್ಲಿಸಬಾರದು. ಯಾರೇ ಬಂದರೂ ಅದನ್ನು ಮುಂದುವರಿಸಿಕೊಂಡು ಹೋಗಲೇಬೇಕು ಎಂದರು.