ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹಾಗೂ ಸಾರ್ವಜನಿಕರು ಮತ್ತು ಖಾಸಗಿ ಪಾಲುದಾರಿಕೆ ಅಗತ್ಯ. ಈ ನಿಟ್ಟಿನಲ್ಲಿ ಯಾರು ಬೇಕಾದರೂ ಉತ್ತಮ ಸಲಹೆ, ಅಭಿಪ್ರಾಯಗಳನ್ನು ನೀಡಬಹುದು. ಆದರೆ, ಕ್ಯಾಸಿನೋದಂತಹ ಚಟುವಟಿಕೆಗಳಿಗೆ ಅವಕಾಶ ನೀಡುವಂತಹ ಸಲಹೆಗಳನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಂತೆ ಹಲವರು ಸಲಹೆ ನೀಡಿದ್ದಾರೆ. ಹಾಗೆಂದ ಮಾತ್ರಕ್ಕೆ ಕ್ಯಾಸಿನೋ ನಡೆಸುವುದಕ್ಕೆ ಅನುಮತಿ ನೀಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಅಂತಹಾ ಸಲಹೆಗಳನ್ನು ಸರ್ಕಾರ ಯಾವುದೇ ಮುಲಾಜಿಲ್ಲದೇ ತಿರಸ್ಕರಿಸಲಿದೆ ಎಂದರು.
ಪರಿಷ್ಕೃತ ಪ್ರವಾಸೋದ್ಯಮ ನೀತಿಯು ರಾಜ್ಯವನ್ನು ಉನ್ನತ ಶ್ರೇಣಿಯ ಪ್ರವಾಸೋದ್ಯಮವನ್ನಾಗಿಸುವ ವಿಶ್ವಾಸವಿದೆ. ಈ ದಿಸೆಯಲ್ಲಿ ಹೂಡಿಕೆ, ಮೂಲಸೌಕರ್ಯ, ಪರಂಪರೆ, ತಂತ್ರಜ್ಞಾನವನ್ನು ಹೆಚ್ಚು ಬಳಕೆ ಮಾಡಲು ಗಮನ ಹರಿಸಲಾಗುತ್ತಿದೆ. ಇದಕ್ಕೆ ಇಲಾಖೆ, ಸಾರ್ವಜನಿಕ ಮತು ಖಾಸಗಿ ಪಾಲುದಾರಿಕೆ ಒಟ್ಟಾಗಿ ಹೆಜ್ಜೆ ಇಡುವ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ನಾವು ಕೇವಲ ರಾಜಕಾರಣಿಗಳು, ಅಧಿಕಾರಿಗಳ ಸಭೆ ನಡೆಸಿ ನೀತಿ ರೂಪಿಸುತ್ತಿಲ್ಲ. ಸಾರಿಗೆ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್ ಮಾಲೀಕರು, ವ್ಯಾಪಾರಿಗಳ ಸಂಘಟನೆಗಳು, ತಜ್ಞರು, ಪ್ರವಾಸಿ ತಾಣಗಳ ಸಾರ್ವಜನಿಕ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಳಗೊಂಡು ಅವರ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದರು.