ಬೆಂಗಳೂರು: ಶಕ್ತಿ ಯೋಜನೆಯಿಂದ ರಾಜ್ಯ ಸಾರಿಗೆ ಸಂಸ್ಥೆಯನ್ನು ನಿಶ್ಯಕ್ತಿಗೊಳಿಸಿರುವ ಕಾಂಗ್ರೆಸ್ ಸರ್ಕಾರ ತಕ್ಷಣವೇ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜೆಡಿಎಸ್ ಸರ್ಕಾರ ಒತ್ತಾಯಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪಕ್ಷವೂ, ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಿಂದ ರಾಜ್ಯ ಸಾರಿಗೆ ಸಂಸ್ಥೆಯನ್ನು ನಿಶ್ಯಕ್ತಿಗೊಳಿಸಿದೆ. ಬಾಕಿ ಉಳಿಸಿಕೊಂಡಿರುವ ಪಿಎಫ್ ಹಣ, 38 ತಿಂಗಳ ಆರಿಯರ್ಸ್ ಮತ್ತು ಗ್ಯಾಚ್ಯುಟಿ ಹಣವನ್ನು ಪಾವತಿಸುವಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ತಿರುಗಿಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಇನ್ನು ಡಿಸೆಂಬರ್ 30ರ ಒಳಗೆ ತಮ್ಮ ಬೇಡಿಕೆ ಈಡೇರಿಸದಿದ್ದರೇ, ರಾಜ್ಯವ್ಯಾಪಿ ಸರ್ಕಾರಿ ಬಸ್ ಸೇವೆ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ರಾಜ್ಯ ಜನರ ಹಿತದೃಷ್ಟಿಯಿಂದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ , ಸಾರಿಗೆ ನೌಕರರ ಬಾಕಿ ಹಣವನ್ನು ತಕ್ಷಣವೇ ಪಾವತಿಸಿ ಹಾಗೂ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಎಂದು ಆಗ್ರಹಿಸಿದ್ದಾರೆ.