ಬೆಂಗಳೂರು: ಬೀದರ್ ಮತ್ತು ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣವನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಹಾರ ರಾಜ್ಯದಂತೆ ಕರ್ನಾಟಕವೂ ಕೂಡ ದರೋಡೆಕೋರರ ರಾಜ್ಯವಾಗುತ್ತಿದೆ. ಬೀದರ್‌ನಲ್ಲಿ ಹಾಡಹಗಲೇ ಎಸ್‌ಬಿಐ ಬ್ಯಾಂಕ್ ಮುಖ್ಯ ಕಚೇರಿಯ ಮುಂದೆಯೇ ದರೋಡೆ ನಡೆದಿದೆ. ಇಲ್ಲಿ ದರೋಡೆ ನಡೆಸಿ ದುಷ್ಕರ್ಮಿಗಳು ಆರಾಮಾಗಿ ವಿಮಾನ ರೈಲುಗಳಲ್ಲಿ ಹೋಗುತ್ತಿದ್ದಾರೆ. ಪೊಲೀಸರು ಬೀಟ್‌ನಲ್ಲಿ ಇದ್ದರು ಯಾರನ್ನು ಬಂಧಿಸಿಲ್ಲ. ಸಿದ್ದರಾಮಯ್ಯ ಈ ದರೋಡೆಗಳ ಕುರಿತು ಪೊಲೀಸ್ ಅಧಿಕಾರಿಗಳ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸರು ರಾಜ್ಯದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಡಕು ಜಾಸ್ತಿಯಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರು, ನಾಯಕರು ಡಿನ್ನರ್ ಮೀಟಿಂಗ್ ಎಂದು ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಜನತೆಯ ಸುರಕ್ಷತೆ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಇನ್ನಾದರೂ ಕುರ್ಚಿ ಜಗಳ ಬಿಟ್ಟು ಕೆಲಸ ಮಾಡಿ ಎಂದು ಆರ್.ಅಶೋಕ್ ಆಡಳಿತ ಪಕ್ಷದ ವಿರುದ್ಧ ಗುಡುಗಿದರು.