- ಪ್ರಸನ್ನಕುಮಾರ್ ಕೆರಗೋಡು
ರಾಜ್ಯದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ನೀಡಬೇಕೆನ್ನುವ ವಿಚಾರ ಕಗ್ಗಂಟು ಹಾಗೂ ಮುಗಿಯದ ಗೊಂದಲವಾಗಿ ದಶಕಗಳೇ ಕಳೆದುಹೋದವು. ಕನ್ನಡವೇ ಶಿಕ್ಷಣದ ಮಾಧ್ಯಮ ಆಗಬೇಕು ಎನ್ನುವ ಅನೇಕ ಅಭಿಪ್ರಾಯಗಳು ಹಾಗೂ ಹೋರಾಟಗಳ ಹೊರತಾಗಿಯೂ ಈ ದಿಸೆಯಲ್ಲಿ ಆಗಿಹೋದ ಯಾವ ಸರ್ಕಾರಗಳೂ ರಚನಾತ್ಮಕ ಮತ್ತು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಮತ್ತೊಮ್ಮೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಈ ಬಗ್ಗೆ ಯೋಚಿಸುವಂತಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಬಹುತೇಕ ಎಲ್ಲಾ ಶಿಕ್ಷಣ ತಜ್ಞರೂ ತಾಯಿನುಡಿ ಮಾಧ್ಯಮದಲ್ಲಿನ ಶಿಕ್ಷಣದ ಮಹತ್ವವನ್ನು ಇನ್ನಿಲ್ಲದಂತೆ ಮನದಟ್ಟು ಮಾಡಿದ್ದಾರೆ. ನಾನು ನನ್ನ ಮಾತಭಾಷೆ ತಮಿಳಿನಲ್ಲಿ ಗಣಿತ ಮತ್ತು ವಿಜ್ಞಾನ ಕಲಿತ ಕಾರಣ ನಾನು ಓರ್ವ ವಿಜ್ಞಾನಿಯಾದೆ ಎಂದು ವಿಶ್ವಾಸದಿಂದ ಹೇಳುವ ಅಬ್ದುಲ್ ಕಲಾಂರವರ ಮಾತಾಗಲಿ ಅಥವಾ ನಾನು ನನ್ನ ತಾಯಿಭಾಷೆ ಬಂಗಾಲಿಯಲ್ಲಿ ಹಾಡಲು ಕಲಿತೆ, ನಂತರ ಹಿಂದಿ, ತೆಲುಗು, ತಮಿಳು, ಗುಜರಾತಿ ಮತ್ತು ಸಾಧ್ಯವಿರುವ ಎಲ್ಲಾ ಭಾಷೆಗಳಲ್ಲೂ ಹಾಡುತ್ತಾ ಸಾಗಿದೆ ಎಂದು ಹೇಳುವ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ಮಾತು ಮಾತೃ ಭಾಷಾ ಮಾಧ್ಯಮದ ಕಲಿಕೆಯ ಮಹತ್ವವನ್ನು ಸಾರುತ್ತದೆ.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು ಹಾಗೂ ದೊಡ್ಡ ಸಂಖ್ಯೆಯ ಶಾಲೆಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಗೆ ಬರುತ್ತವೆ. ಸದ್ಯ ಚಾಲ್ತಿಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಪ್ಯಾರಾ 4.11 ರಲ್ಲಿ , ಸಾಧ್ಯವಿರುವಲ್ಲೆಲ್ಲಾ, ಕನಿಷ್ಠ 5 ನೇ ತರಗತಿಯವರೆಗೆ ಅಥವಾ 8 ನೇ ತರಗತಿಯವರೆಗೆ ಮತ್ತು ನಂತರದವರೆಗೆ ಬೋಧನಾ ಮಾಧ್ಯಮವು ಮನೆ ಭಾಷೆ/ಮಾತಭಾಷೆ/ಸ್ಥಳೀಯ ಭಾಷೆ/ಪ್ರಾದೇಶಿಕ ಭಾಷೆಯಾಗಿರತಕ್ಕದ್ದು. ಅದರ ನಂತರ, ಮನೆ/ಸ್ಥಳೀಯ ಭಾಷೆಯನ್ನು ಸಾಧ್ಯವಿರುವಲ್ಲೆಲ್ಲಾ ಒಂದು ಭಾಷೆಯಾಗಿ ಕಲಿಸುವುದನ್ನು ಮುಂದುವರಿಸಬೇಕು” ಎಂದು ಹೇಳಿದೆ. ಇದರ ಜೊತೆಗೆ ನ್ಯಾಷನಲ್ ಕರಿಕ್ಯುಲಂ ಫ್ರೇಮ್ ವರ್ಕ್- 2022 ಮಕ್ಕಳಿಗೆ ಎಂಟು ವರ್ಷದವರೆಗೆ ಅವರ ಮಾತಭಾಷೆಯಲ್ಲಿ ಕಲಿಸಬೇಕೆಂದು ಶಿಫಾರಸು ಮಾಡಿದೆ.” ಶಿಕ್ಷಣ ಹಕ್ಕು ಕಾಯಿದೆ, 2009 ರ ಅಡಿಯ ಅಧ್ಯಾಯ v ಸೆಕ್ಷನ್ 29(f) ಪ್ರಶ್ನಾತೀತವಾಗಿ ಶಿಕ್ಷಣದ ಮಾಧ್ಯಮವು ಪ್ರಾಯೋಗಿಕವಾಗಿ ಮಗುವಿನ ಮಾತಭಾಷೆಯಲ್ಲಿರಬೇಕು” ಎಂದು ಹೇಳುತ್ತದೆ. ಯುನೆಸ್ಕೊ, ಪಿಸಾ (ASER), ನೀಡಿರುವ ವರದಿಗಳು ಕೂಡ ಉತ್ತಮ ಮತ್ತು ಪರಿಣಾಮಕಾರಿ ಕಲಿಕೆಗೆ ತಾಯ್ನುಡಿಯ ಮಾಧ್ಯಮ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿವೆ. ಇದೆಲ್ಲವನ್ನೂ ತಮ್ಮ ಭಾಷಣಗಳು ಹಾಗೂ ಇನ್ನಿತರೆಡೆ ನಿರರ್ಗಳವಾಗಿ ಉಲ್ಲೇಖಿಸುವ ಅಧಿಕಾರಸ್ಥರು ಇದನ್ನು ಅನುಷ್ಠಾನಕ್ಕೆ ತರುವುದರಲ್ಲಿ ಮಾತ್ರ ಇಚ್ಛಾಶಕ್ತಿ ತೋರದೆ ಹಾರಿಕೆ-ತೇಲಿಕೆಯ ನೀತಿ ಅನುಸರಿಸುತ್ತಿರುವುದು ಇಂದಿಗೂ ಮುಂದುವರಿದಿದೆ.
ಒಂದರಿಂದ ಐದನೇ ತರಗತಿ ತನಕ ತಾಯ್ನುಡಿಯಲ್ಲಿ ಶಿಕ್ಷಣ ನೀಡುವ ಸಂಬಂಧ ಕರ್ನಾಟಕ ವಿಧಾನಸಭೆ 2015ರಲ್ಲಿಯೇ ವಿಧೇಯಕ ಅಂಗೀಕರಿಸಿ ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ ಮಾನವ ಸಂಪನ್ಮೂಲ ಸಚಿವಾಲಯ ಈ ವಿಧೇಯಕ ಹಿಂಪಡೆಯುವಂತೆ ರಾಜ್ಯದ ಮೇಲೆ ಒತ್ತಡ ಹೇರುತ್ತಿದೆ. ಇದಕ್ಕೆ ಸಾಥ್ ಎಂಬಂತೆ ರಾಜ್ಯ ಸರ್ಕಾರವೇ ಈಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪ್ರತಿ ಗ್ರಾಮಪಂಚಾಯಿತಿಗೊಂದು ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ತೆರೆಯಲು ಮುಂದಾಗಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ಸರ್ಕಾರಿ ಶಾಲೆಗಳ ಸಂಖ್ಯೆಗೆ ಸರಿ ಸಮಾನವಾಗಿ ಖಾಸಗಿ ಶಾಲೆಗಳಿದ್ದು, ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಒಂದೆಡೆಯಾದರೆ, ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವ ಮೂಲಕ ದೊಡ್ಡ ಗೊಂದಲವನ್ನು ನಿರ್ಮಿಸಲಾಗುತ್ತಿದೆ.
ಇತ್ತೀಚಿನ ದಶಕಗಳಲ್ಲಿ ಇಂಗ್ಲಿಷ್ ಮಾತ್ರದಿಂದಲೇ ಉದ್ಯೋಗ ದೊರಕುತ್ತದೆ ಹಾಗೂ ಕನ್ನಡದಲ್ಲಿ ವ್ಯಾಸಂಗ ಮಾಡಿದರೆ ಈ ಕಾರ್ಪೊರೇಟ್ ಜಗತ್ತಿಗೆ ಬೇಕಾಗುವ ಕೌಶಲಗಳನ್ನು ಗಳಿಸಲಾಗುವುದಿಲ್ಲ ಎನ್ನುವ ಭ್ರಮೆಯನ್ನು ಸಷ್ಟಿಸಲಾಗುತ್ತಿದೆ. ಇದೆಲ್ಲದರ ನಡುವೆ ಖ್ಯಾತ ವಿಜ್ಞಾನಿಗಳು, ತಂತ್ರಜ್ಞರು, ಬರಹಗಾರರು, ಆಡಳಿತಗಾರರು, ಉದ್ಯಮಿಗಳು ಸೇರಿದಂತೆ ಅನೇಕ ಸಾಧಕರು ತಾವೆಲ್ಲ ಮಾತಭಾಷಾ ಮಾಧ್ಯಮ ಕಲಿಕೆಯವರೇ ಎಂದು ಎಷ್ಟು ಹೇಳಿದರೂ ಪೋಷಕರು ಧೈರ್ಯ ಮಾಡದಿರುವುದನ್ನು ಖಾಸಗಿ ಶಾಲೆಗಳು ಬಂಡವಾಳ ಮಾಡಿಕೊಂಡಿವೆ. ಇಲ್ಲಿ ಇನ್ನೊಂದು ಗಂಭೀರ ವಿಚಾರದ ಚರ್ಚೆ ಮುನ್ನೆಲೆಗೆ ಬರುತ್ತದೆ. ಅದೆಂದರೆ, ಬಡವರು, ಅನುಸೂಚಿತ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳೇ ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಮಾಧ್ಯಮ ಅನುಷ್ಠಾನ ಏಕೆ ಎನ್ನುವಂತಹದ್ದು. ಇಂತಹ ಎಲ್ಲ ಪ್ರಶ್ನೆಗಳಿಗೂ ಇಂದಿಗೂ ಉತ್ತರವಿಲ್ಲದಂತಾಗಿದೆ.
ಕಳೆದ ಮೂರು ದಶಕಗಳಲ್ಲಿ ಇಂಗ್ಲಿಷ್ ಪಾರಮ್ಯದ ಪರಿಣಾಮ, ಸ್ವಚ್ಛವಾಗಿ ಕನ್ನಡ ಮಾತನಾಡುವ, ಬರೆಯುವ, ಕನ್ನಡದಲ್ಲಿ ವೇದಿಕೆ ಕಾರ್ಯಕ್ರಮ ನಿರ್ವಹಿಸುವ, ಕನ್ನಡದಲ್ಲಿ ಸ್ಪಷ್ಟವಾಗಿ ಬೋಧನೆ ಮಾಡುವ, ಬೇರೆ ಭಾಷೆಯಿಂದ ಕನ್ನಡಕ್ಕೆ ಭಾಷಾಂತರ ಮಾಡುವ, ಪತ್ರಿಕೆಗಳಿಗೆ, ವೆಬ್ ಪುಟಗಳಿಗೆ ಕನ್ನಡದಲ್ಲಿ ಗುಣಮಟ್ಟದ ಕಂಟೆಂಟ್ ನೀಡಬಲ್ಲ ಯುವಕ-ಯುವತಿಯರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮುಂದುವರಿದಲ್ಲಿ ಕನ್ನಡವು ಆಡುಭಾಷೆಯಾಗಿ ಮಾತ್ರ ಕೆಲವು ಶತಮಾನಗಳ ಕಾಲ ಉಳಿದು, ಕೊನೆಗೆ ಅದಕ್ಕೂ ಆತಂಕ ಎದುರಾಗುವ ಸನ್ನಿವೇಶ ನಿರ್ಮಾಣವಾಗಲಿದೆ. ಇಂಗ್ಲಿಷನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಬೋಧಿಸಿ ಸರ್ವರಿಗೂ ಸಮಾನ ಎನ್ನುವ ನೀತಿಯಂತೆ ರಾಜ್ಯದೆಲ್ಲೆಡೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಮಾಧ್ಯಮದ ಭಾಷೆಯಾಗಿ ಅನುಷ್ಠಾನಿಸುವಲ್ಲಿ ಇಚ್ಛಾಶಕ್ತಿ ತೋರುವಂತಾದರೆ ಮಾತ್ರ ದಶಕಗಳ ಗೊಂದಲಕ್ಕೆ ತೆರೆ ಬೀಳುತ್ತದೆ.
ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಲಾಗುವುದು ಎಂದು ಅನುಮತಿ ಪಡೆದು ಇಂಗ್ಲಿಷ್‌ನಲ್ಲಿ ಬೋಧನೆ ಮಾಡಲಾಗುತ್ತಿದೆ. ಈ ಕಾರಣದಿಂದ ಪರೀಕ್ಷೆಗೆ ಅನುಮತಿ ನಿರಾಕರಿಸಿದಾಗ ಮಕ್ಕಳ ಭವಿಷ್ಯದ ನೆಪವೊಡ್ಡಿ ಪೋಷಕರನ್ನು ಮುಂದೆ ಬಿಟ್ಟು ಬಚಾವಾಗುವ ತಂತ್ರವನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ.





