ಮಂಗಳೂರು: ಇನ್ನು ಮುಂದೆ ಹೆಣ್ಣು ಮಕ್ಕಳು ತಮ್ಮ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಮ್ಮು-ಕಾಶ್ಮೀರದ (Jammu and Kashmir) ಪಹಲ್ಗಾಮ್ (Pahalgam) ಉಗ್ರರ ದಾಳಿ ಖಂಡಿಸಿ ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ವೇಳೆ ಹಿಂದೂಗಳು ಉಗ್ರರಿಗೆ ಕೇವಲ ಒಂದು ತಲ್ವಾರ್ ತೋರಿಸಿದರೆ ಸಾಕಿತ್ತು. ಆಗ ಅಲ್ಲಿ ನಡೆಯುವ ಕಥೆಯೇ ಬೇರೆ ಆಗುತ್ತಿತ್ತು ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಹೆಣ್ಣುಮಕ್ಕಳು ತಮ್ಮ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಪೌಡರ್, ಬಾಚಣಿಗೆ ಇಟ್ಟುಕೊಳ್ಳುವ ಜೊತೆಗೆ ಆರು ಇಂಚಿನ ಚಾಕು ಇಟ್ಟುಕೊಳ್ಳಿ. ಅದಕ್ಕೆ ಯಾವುದೇ ಲೈಸೆನ್ಸ್ ಬೇಕಿಲ್ಲ ಎಂದು ಹೇಳಿದರು.
ಸಂಜೆ ಮೇಲೆ ಓಡಾಡಿದರೆ ನಿಮ್ಮ ಮೇಲೆ ಖಂಡಿತಾ ಆಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಬೇಡಿ ಎಂದು ಅವರ ಬಳಿ ಬೇಡಿಕೊಂಡರೆ ನಿಮ್ಮ ಕಥೆಯನ್ನು ಅಲ್ಲೇ ಮುಗಿಸಿ ಬಿಡುತ್ತಾರೆ. ಅದರ ಬದಲು ಚೂರಿ ತೋರಿಸಿ ಬಾ ಎಂದು ಸವಾಲು ಹಾಕಿ. ಆಗ ಅವರೆಲ್ಲಾ ಹೆದರಿ ಓಡಿ ಹೋಗುತ್ತಾರೆ ಎಂದು ಹೇಳಿದ್ದಾರೆ.





