ಬೆಂಗಳೂರು : ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಮತ ಕಳ್ಳತನ ಆರೋಪದ ವಿಚಾರದಲ್ಲಿ ಸಚಿವ ಕೆಎನ್ ರಾಜಣ್ಣ ಪಕ್ಷ ವಿರೋಧಿ ಹೇಳಿಕೆ ನೀಡಿದ್ದರು. ಇದು ಕೆಎನ್ ರಾಜಣ್ಣ ಅವರಿಗೆ ಮುಳುವಾಗಿ ಪರಿಣಮಿಸಿದ್ದು, ಶಾಸಕ ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ.
ಈ ಬಗ್ಗೆ ರಾಜಭವನದಿಂದ ಸರ್ಕಾರಕ್ಕೆ ಅಧಿಕೃತ ಪತ್ರ ರವಾನಿಸಲಾಗಿದೆ. ಸಚಿವ ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜಭವನದಿಂದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ತಲುಪಿದೆ.
ಪತ್ರದಲ್ಲೇನಿದೆ?
ಮುಂದಿನ ಅಗತ್ಯ ಕ್ರಮಕ್ಕಾಗಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದು ಹಾಕುವ ಕುರಿತು ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಈ ಪತ್ರದೊಂದಿಗೆ ಕಳುಹಿಸಲು ನನಗೆ ನಿರ್ದೇಶಿಸಲಾಗಿದೆ ಎಂದು ಪತ್ರದಲ್ಲಿದೆ.
ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಶಾಸಕ ಕೆಎನ್ ರಾಜಣ್ಣ ಅವರು ಸೋಮವಾರ ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆ.ಎನ್.ರಾಜಣ್ಣ ನೀಡಿದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗೀಕರಿಸಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಳುಹಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಎನ್ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದರು.





