ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ ಜಾ.ದಳ ಸಮಾವೇಶ ಒಂದು ರೀತಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿತು.
ಪ್ರಾದೇಶಿಕ ಹಿನ್ನೆಲೆ ಹೊಂದಿರುವ ಜಾ.ದಳಕ್ಕೆ 25 ವರ್ಷ ತುಂಬಿದ್ದರಿಂದ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಐತಿಹಾಸಿಕ ಸಮಾವೇಶ ಆಯೋಜಿಸಲಾಗಿತ್ತು. ಈ ಮೂಲಕ ಮುಂದಿನ ಚುನಾವಣೆಗಳಿಗೆ ತಯಾರಾಗುವಂತೆ ಕಾರ್ಯಕರ್ತರಿಗೆ ಜಾ.ದಳ ಮುಖಂಡರು ಕರೆ ನೀಡಿದರು.
ಹಬ್ಬದ ರೀತಿಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಜಾ.ದಳ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಜಾ.ದಳ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸಮಾವೇಶ ನಡೆಸುತ್ತೇವೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಥಮ ಬೆಳ್ಳಿಹಬ್ಬ ಆಚರಣೆ ಮಾಡಲು ನಿರ್ಧಾರ ಮಾಡಿದ್ದೆವು. ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರಮುಖ ನಾಯಕರು, ಮಾಜಿ ಶಾಸಕರು ಎಲ್ಲಾಸೇರಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಜತೆಗೂಡಿ ಸಮಾವೇಶವನ್ನು ಐತಿಹಾಸಿಕಗೊಳಿಸಿದ್ದೀರಿ ಇದಕ್ಕೆ ಕಾರ್ಯಕರ್ತರ ಶಕ್ತಿಯೇ ಕಾರಣ ಎಂದು ಎಚ್ಡಿಕೆ ಬಣ್ಣಿಸಿದರು.
ಹಾಸನ ಜಿಲ್ಲೆಯಲ್ಲಿ ಜಾ.ದಳ ಮುಗಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮುಖ್ಯಮಂತ್ರಿ ಒಳಗೊಂಡಂತೆ ಎರಡು ಸಮಾವೇಶ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಏನೇನು ನಡೆದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಜಿಲ್ಲೆಯ ಪುಣ್ಯಭೂಮಿಯ ಮಣ್ಣಿನಲ್ಲಿ ದೇವೇಗೌಡರು ಜನಿಸಿದವರು. ಸೊಸೈಟಿ ಚುನಾವಣೆಯಿಂದ 62 ವರ್ಷಗಳು ರಾಜಕೀಯದಲ್ಲಿ ಕಳೆದಿದ್ದಾರೆ. 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಜಿಲ್ಲೆಯ ಜನರ ಆಶೀರ್ವಾದದಿಂದ ಸಾಮಾನ್ಯ ರೈತನ ಮಗ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಅವಕಾಶ ಸಿಕ್ಕಿದ್ದು, ಜಿಲ್ಲೆಯ ಜನರು ನೀಡಿರುವ ಶಕ್ತಿ. ಜಿಲ್ಲೆಯ ಜನರಿಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂಬ ಸೂಚನೆಯನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ಬೆಂಗಳೂರು ಜಿಬಿಎ, ಗ್ರಾಪಂಗಳ ಚುನಾವಣೆ ಆಗಬೇಕಿದೆ. ಜಿಪಂ, ತಾಪಂ ಚುನಾವಣೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.





