ಬೆಂಗಳೂರು: ಇಲ್ಲಿನ ಅಮೆರಿಕದ ಕಾನ್ಸುಲೇಟ್ ಕಚೇರಿಯ ಕಾರ್ಯಾರಂಭ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ನಗರದ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನ ಕಚೇರಿಯನ್ನು ಇಂದು(ಜನವರಿ.17) ಅಮೆರಿಕ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಉದ್ಘಾಟಿಸಿದ್ದಾರೆ.
ಈ ಕಾನ್ಸುಲೇಟ್‌ಅನ್ನು ಉದ್ಘಾಟಿಸಿ ಮಾತನಾಡಿದ ಜೈಶಂಕರ್ ಅವರು, ಭಾರತದಲ್ಲಿರುವ ಅಮೆರಿಕದ 5ನೇ ಕಾನ್ಸುಲೇಟ್ ಕಚೇರಿ ಇದಾಗಿದ್ದು, ಬೆಂಗಳೂರು ಜನರ ಬಹುದಿನಗಳ ಬೇಡಿಕೆಯಾಗಿದೆ. ಅಲ್ಲದೇ ಜನತೆಯೇ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಇಲ್ಲಿನ ಜನರ ಜಾಗತಿಕ ಆಶೋತ್ತರಗಳಿಗೆ ಸ್ಪಂದಿಸಲು ಅಮೆರಿಕ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ ಅಪೂರ್ವ ವೇದಿಕೆಯಾಗಿದೆ ಎಂದರು.
ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿ, ಇಂದು ಕಾನ್ಸುಲೇಟ್ ಕಚೇರಿ ಪ್ರಾರಂಭವಾಗಿರುವುದು ಬೆಂಗಳೂರು ಹಾಗೂ ರಾಜ್ಯದ ಜನರಿಗೆ ದೊಡ್ಡ ಸಂಗತಿಯಾಗಿದೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿ ಮತ್ತು ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಬೆಂಗಳೂರಿಗೆ ಅಮೆರಿಕ ಕಾನ್ಸುಲೇಟ್ ಆರಂಭಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ಅದು ಇಂದು ಈಡೇರಿದಲ್ಲದೆ, ಈ ಕಚೇರಿಯ ಉದ್ಘಾಟನೆ ಅನೇಕ ಶಾಸಕರು ಮತ್ತು ಸಂಸದರ ಪ್ರಯತ್ನದ ಫಲವಾಗಿದೆ. ಜೊತೆಗೆ ಕಾನ್ಸುಲೇಟ್ ಕಚೇರಿಯೂ ಮುಂದಿನ ದಿನಗಳಲ್ಲಿ ಅಮೆರಿಕ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಅಮೆರಿಕ ಕಾನ್ಸುಲೇಟ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ಈ ಸಮಾರಂಭವನ್ನು ಆಯೋಜಿಸಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಅವರ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕಾ ಸಹಕಾರವು, ಈ ಎರಡು ದೇಶಗಳ ಜನರ ದೃಢವಾದ ಸಂಬಂಧಗಳಿಂದ ಮುನ್ನಡಿಸಲ್ಪಟ್ಟಿದೆ. ಇದು ತಂತ್ರಜ್ಞಾನ, ನಾವೀನ್ಯತೆ, ಬಾಹ್ಯಾಕಾಶ, ರಕ್ಷಣೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಉದ್ಘಾಟನೆಗೊಂಡಿರುವ ಅಮೆರಿಕ ಕಾನ್ಸುಲೇಟ್ ಈ ಸಹಯೋಗಗಳನ್ನು ಬಲಪಡಿಸುವಲ್ಲಿ, ವಿಚಾರ ವಿನಿಮಯವನ್ನು ಉತ್ತೇಜಿಸುವಲ್ಲಿ ಮತ್ತು ಪ್ರತಿಭೆಗಳ ಗತಿಶೀಲತೆಯನ್ನು ಸುಗಮಗೊಳಿಸುವಲ್ಲಿ ನೆರವಾಗಲಿದೆ ಎಂದು ಹೇಳಿದ್ದಾರೆ.