ಬೆಳಗಾವಿ: 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆದಿತ್ತು. ಅದರ ಶತಮಾನೋತ್ಸವ ಹಿನ್ನಲೆಯಲ್ಲಿ, ʼಜೈ ಬಾಪು, ಜೈ ಭೀಮ್, ಜೈ ಸಂವಿಧಾನʼ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು (ಜ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಜನ ಸೇರಲಿದ್ದು, ಶತಮಾನೋತ್ಸವದ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್ ಈ ಸಮಾವೇಶದ ಸಿದ್ದತೆ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಜನರಿಗೆ ತಿಳಿಸುವ ಆಗತ್ಯವಿದೆ. ನಾವು ಈಗಿರಲು ಕಾರಣವೇ ಸಂವಿಧಾನ. ನಾವು ಸಂವಿಧಾನದ ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಹುಶಃ ಜೋಶಿ ಅವರಿಗೆ ಇತಿಹಾಸ ತಿಳಿದಿಲ್ಲ ಅನಿಸುತ್ತದೆ. ಸಂವಿಧಾನದ ಬಗ್ಗೆ ಸಾವರ್ಕರ್, ಗೋಲ್ವಾಲ್ಕರ್ ಅವರಗಿರುವ ಅಭಿಪ್ರಾಯ ಇವರಿಗೆ ತಿಳಿದಿಲ್ಲವೇನೊ ಎಂದು ಪ್ರಶ್ನಿಸಿದರು.
ಇನ್ನು ʼಗೋಡ್ಸೆ ಹತ್ಯೆಯಲ್ಲಿ ನೆಹರೂ ಅವರ ಪಾತ್ರ ಇದೆʼ ಎಂಬ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಇವರು ಇತಿಹಾಸ ಓದಿಯೇ ಇಲ್ಲ ಹಾಗಾಗಿಯೇ ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ ಎಂದರು.