ಬೆಂಗಳೂರು: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದು ಹೇಳಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ತಡಮಾಡದೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಸಂಗಮೇಶ್, ಈ ಜನ್ಮದಲ್ಲಿ ಹಿಂದೂವಾಗಿ ಹುಟ್ಟಿದ್ದಾರೆ. ಮೊದಲು ಹುಟ್ಟಿರುವ ಧರ್ಮದ ಋಣ ತೀರಿಸುವ ಕೆಲಸ ಮಾಡಲಿ. ನಂತರ ಮುಸ್ಲಿಂ ಆಗಿ ಹುಟ್ಟುವ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಈ ಜನ್ಮದಲ್ಲೇ ನೀವು ಮುಸ್ಲಿಂ ಆಗಿ ಹುಟ್ಟಬೇಕಿತ್ತು. ಅದನ್ನು ತಡೆದವರು ಯಾರು?, ನಿಮಗೆ ಮುಂದಿನ ಜನ ಬೇಡ. ತಕ್ಷಣವೇ ಮತಾಂತರವಾದರೆ ಮುಸ್ಲಿಮರಾಗಿ ಬಿಡುತ್ತೀರಿ. ಇದೆಲ್ಲಾ ಓಲೈಕೆಯ ದ್ವಂದ್ವ ಮಾತುಗಳು. ಸಂಗಮೇಶ್ ಮಾತುಗಳನ್ನು ಭದ್ರಾವತಿಯಲ್ಲಿ ಮುಸ್ಲಿಮರೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದು ರಾಜಕೀಯ ಬೂಟಾಟಿಕೆ ಎಂದು ತಿರುಗೇಟು ಕೊಟ್ಟರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸರ್ಕಾರವೇ ನೇರಹೊಣೆ. ಹಿಂದೂಗಳು ನೆಮ್ಮದಿಯಿಂದ ಗಣೇಶ ಹಬ್ಬ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.





