ಬೆಂಗಳೂರು: ಗಂಗೇನಹಳ್ಳಿ ಬಡಾವಣೆಯ ಜಮೀನು ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಇತ್ತೀಚಿಗೆ ಮಾಜಿ ಸಿಎಂ ಯಡಿಯೂರಪ್ಪ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೂ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಇದೀಗ, ಅದರಂತೆ ವಿಚಾರಣೆಗೆ ಲೋಕಾ ಮುಂದೆ ಎಚ್‌ಡಿಕೆ ಹಾಜರಾಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕುಮಾರಸ್ವಾಮಿ ನೇರವಾಗಿ ಲೋಕಾಯುಕ್ತ ಕಚೇರಿಗೆ ತೆರಳಿದ್ದಾರೆ. 9 ವರ್ಷಗಳ ಹಿಂದೆ ದಾಖಲಾಗಿದ್ದ ತನಿಖೆ ಮಂದಗತಿಯಲ್ಲಿ ಸಾಗಿತ್ತು, ಇತ್ತಿಚೆಗೆ ಲೋಕಾ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
ಏನಿದು ಪ್ರಕರಣ?
ಗಂಗೇನೆಹಳ್ಳಿ ಬಡಾವಣೆಯ 7/1ಬಿ,ಸಿ ಹಾಗೂ ಸರ್ವೆ ನಂಬರ್ 1.11ಎಕರೆ ಜಮೀನು ಬಿಡಿಎಗೆ ಭೂಸ್ವಾದೀನಗೊಂಡಿದ್ದು, ಇದನ್ನು ಡಿನೋಟಿಫೈ ಮಾಡಬೇಕು ಎಂದು ರಾಜಶೇಖರಯ್ಯ ಎಂಬುವರು ಅರ್ಜಿ ಹಾಕುತ್ತಾರೆ. 2007ರಲ್ಲಿ ಬಂದ ಈ ಅರ್ಜಿಯನ್ನು ಅದೇ ದಿನ ಅಂದಿನ ಸಿಎಂ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಡಿನೋಟಿಫೈ ಮಾಡಲು ಸೂಚಿಸಿದ್ದರು ಎಂದು ಇತ್ತೀಚೆಗೆ ಕಂದಾಯ ಸಚಿವ ಕೃಷ್ಣೆಬೈರೇಗೌಡ ಆರೋಪಿಸಿದ್ದರು.
ಈ ಪ್ರಕರಣ ಸಂಬಂಧ ಲೋಕಾ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಎಚ್‌ಡಿಕೆ ಗೆ ಸೂಚಿಸಿದ್ದರು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದಾರೆ.