ಬೆಂಗಳೂರು : ಬರ, ವಿದ್ಯುತ್ ಕ್ಷಾಮ ಸೇರಿ ಅನೇಕ ಗಂಭೀರ ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬರ ಅಧ್ಯಯನಕ್ಕಾಗಿ ಪಕ್ಷದ ಜಿಲ್ಲಾ ಮಟ್ಟದ ತಂಡಗಳನ್ನು ರಚನೆ ಮಾಡುವ ಸಂಬಂಧ ಕರೆಯಲಾಗಿದ್ದ ಮಹತ್ವದ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ ಈ ವಿಷಯ ಪ್ರಕಟಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ಐದು ತಿಂಗಳಿನಿಂದ ವೈಫಲ್ಯಗಳ ಕೂಪದಲ್ಲಿ ಸಿಲುಕಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲದಕ್ಕೂ ಕೇಂದ್ರದ ಕಡೆಗೇ ಬೊಟ್ಟು ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿದೆ. ಇದು ಸರಿಯಲ್ಲ. ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡುವ ಬದಲು ಕೇಂದ್ರದ ಬಳಿ ಹೋಗಿ ಪರಿಹಾರ ಕೇಳಬಹುದಿತ್ತಲ್ಲವೇ ಎಂದು ಸಿಎಂ ಹೇಳಿದ್ದಾರೆ. ಸಿಎಂ ಆದವರು ಹೇಳುವ ಮಾತೇ ಇದು? ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರ ಅನ್ನಭಾಗ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಾರೆ. ವಿದ್ಯುತ್ ಕೊರತೆ ಆದಾಗ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಅಂತಾರೆ. ಎಲ್ಲದಕ್ಕೂ ಕೇಂದ್ರದ ಕಡೆಗೇ ಕೈ ತೋರಿಸುತ್ತಾರೆ. ಹಾಗಾದರೆ, ರಾಜ್ಯ ಸರಕಾರ ಎನ್ನುವುದು ಏತಕ್ಕೆ? ಇಲ್ಲಿ ಕೂತು ಇವರು ಏನು ಮಾಡುತ್ತಿದ್ದಾರೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸಿಎಂ ಡಾನ್ಸ್ ಮಾಡುತ್ತಾರೆ! :
214 ತಾಲೂಕುಗಳಲ್ಲಿ ಬರ ಇದೆ ಅಂತ ಸರಕಾರವೇ ಕೇಂದ್ರಕ್ಕೆ ವರದಿ ಕೊಟ್ಟಿದೆ. ಎಸ್ ಡಿ ಆರ್ ಎಫ್ ನಲ್ಲಿ 529 ಕೋಟಿ ರೂ. ಹಣ ಇಟ್ಟಿದ್ದೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ ಸಚಿವರು. ಎಲ್ಲಾ ಕಡೆ ಬರ ಪರಿಸ್ಥಿತಿ ಇದೆ ಎಂದು ಮಾದ್ಯಮಗಳಲ್ಲಿ ನಿತ್ಯವೂ ವರದಿಗಳು ಬರುತ್ತಿವೆ. ಮುಖ್ಯಮಂತ್ರಿಗಳು ಎಲ್ಲೋ ಹೋಗಿ ಡಾನ್ಸ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಜನರು ಕಷ್ಟದಲ್ಲಿದ್ದರೆ ಇವರಿಗೆ ಸಂಭ್ರಮವೋ ಸಂಭ್ರಮ! ಸಂಭ್ರಮ ಮಾಡಿಕೊಂಡು ಜನರನ್ನು ಅಣಕ ಮಾಡುತ್ತಿದ್ದಾರೆ. ಅಲ್ಲಿ ರೈತರ ಕಷ್ಟಕ್ಕೆ ಏನಾದರೂ ಪರಿಹಾರ ಕೊಟ್ಟು ಬಂದರಾ ಇವರು ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಲಬುರಗಿ ನಾಯಕರೊಬ್ಬರು ಮೈಸೂರಿನಲ್ಲಿ ಏನೇನನ್ನೋ ಹೇಳಿದ್ದಾರೆ. ಬಿಜೆಪಿಗೆ ನಾಯಕರು ಜಾಬ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂದಿದ್ದಾರೆ. ಅದೇನು ಎನ್ನುವುದನ್ನು ನಾವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೋರಿಸುತ್ತೇವೆ. ಆದರೆ, ಅವರು ಪ್ರತಿನಿಧಿಸುವ ಕಲಬುರಗಿ ಜಿಲ್ಲೆಯ ಜನರಿಗೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ಆ ಜಿಲ್ಲೆಯಲ್ಲಿನ ತೊಗರಿ ಬೆಳೆಗಾರರ ಸಂಕಷ್ಟ ಗೊತ್ತಿದೆಯಾ ಅವರಿಗೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಾಜಿ ಮುಖ್ಯಮಂತ್ರಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಬಂಡೆಪಪ್ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಆಲ್ಕೊಡ್ ಹನುಮಂತಪ್ಪ, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ನೇಮಿರಾಜ್ ನಾಯಕ್, ಮಾಜಿ ಶಾಸಕ ಆರ್.ಮಂಜಿನಾಥ್, ರಾಜಾ ವೆಂಕಟಪ್ಪ ನಾಯಕ್, ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.