ಬೆಂಗಳೂರು: ಮೈಸೂರು ಮುಡಾ ಹಗರಣದಲ್ಲಿ ನನ್ನ ಪಾತ್ರ ಸೊನ್ನೆ. ನಾನು ಬಹಳ ಕ್ಲಿಯರ್ ಆಗಿದ್ದೇನೆ. ಈ ಹಗರಣದಲ್ಲಿ ನನ್ನದಾಗಲಿ, ಸಿಎಂ ಪತ್ನಿಯವರದಾಗಲಿ ಪಾತ್ರ ಸೊನ್ನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಇಡಿ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ಮುಡಾ ಹಗರಣದಲ್ಲಿ ಯಾವುದೇ ಪಾತ್ರ ಇಲ್ಲ ಎಂದು ಒಪ್ಪಿಕೊಂಡು ಕೋರ್ಟ್ ತಡೆ ನೀಡಿದೆ. ವಿಚಾರಣೆ ಈಗ ಮುಂದಕ್ಕೆ ಹೋಗಿದ್ದು, ಫೆಬ್ರವರಿ.10ರ ನಂತರ ನೋಡೋಣ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಹಾಗೂ ಕಾಂಗ್ರೆಸ್ ಪಕ್ಷ ನ್ಯಾಯಾಂಗ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ಯಾಕೆ ನೋಟಿಸ್ ನೀಡಿದ್ದಾರೆ ಎಂಬುದನ್ನು ಇಡಿ ಮತ್ತು ಸಿಬಿಐ ಅವರನ್ನೇ ಕೇಳಬೇಕು ಎಂದು ಹೇಳಿದರು.
ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯಿತು. ಹಗರಣ ನಡೆದಾಗ ನಾನು ಮಂತ್ರಿ ಆಗಿರಲಿಲ್ಲ. ಸೈಟನ್ನೂ ಪಡೆದಿಲ್ಲ. ನನಗೆ ಕೊಟ್ಟಿರುವುದು ಒಂದೇ ನೋಟಿಸ್. ಸಿಎಂ ಪತ್ನಿಗೆ ಎರಡನೇ ನೋಟಿಸ್ ಕೊಟ್ಟಿದ್ದಾರಾ ಎಂದು ನನಗೆ ಗೊತ್ತಿಲ್ಲ ಎಂದರು.