ಬೆಂಗಳೂರು: ಭಾರೀ ಸಂಚಲನ ಸೃಷ್ಟಿಸಿದ್ದ 2015-16ನೇ ಸಾಲಿನ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 17 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ಸೆಷನ್ ಕೋರ್ಟ್ ಆದೇಶ ಹೊರಡಿಸಿದೆ.
2016ರ ಮಾರ್ಚ್ 21ರಂದು ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ನಡೆದಿತ್ತು. ಆದರೆ ಪರೀಕ್ಷೆ ಆರಂಭವಾಗುವ ಮುನ್ನವೇ ಬೆಳಗ್ಗೆ 7.30ಕ್ಕೆ ವಾಟ್ಸಪ್‌ನಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡಿತ್ತು. ಹೀಗೆ ಪ್ರಶ್ನೆ ಪತ್ರಿಕೆ ವೈರಲ್ ಆದ ಬೆನ್ನಲ್ಲೇ ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಇದರ ತನಿಖೆ ಮಾಡಿದ್ದ ಸಿಐಡಿ ಒಟ್ಟು 18 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ಪೈಕಿ ಓರ್ವ ಆರೋಪಿ ವಿಚಾರಣಾ ಹಂತದಲ್ಲಿಯೇ ಮೃತಪಟ್ಟಿದ್ದ. ಇನ್ನುಳಿದ 17 ಆರೋಪಿಗಳನ್ನು ಇಂದು ( ಏಪ್ರಿಲ್ 25 ) ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ಪರ ವಕೀಲ ಆರ್.ಪಿ. ಚಂದ್ರಶೇಖರ್ ವಾದ ಮಂಡಿಸಿದ್ದರು.





