ಮೈಸೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ರಾಜ್ಯದ 1,763 ಗ್ರಾಮಗಳಲ್ಲಿ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯದ ಪ್ರತಿ ಪಂಚಾಯತ್ ಮಟ್ಟದಲ್ಲೂ ಟಾಸ್ಕ್‌ಫೋರ್ಸ್ ರಚಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ತಿಳಿಸಿದರು.
ಇಂದು(ಜು.2) ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣ ಹಾಗೂ ಆಸ್ತಿ ಹಾನಿ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೂ ಹೆಚ್ಚು ಮಳೆ ಆದರೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಗುರುತಿಸಿಕೊಂಡಿರಬೇಕು ಎಂದರು.
ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತದೆ. ಈಗಾಗಲೇ ಮಳೆಯಿಂದ 20 ಸಾವು ಸಂಬoಧಿಸಿದೆ. ಜಿಲ್ಲಾಧಿಕಾರಿಗಳು ಪ್ರತಿಯೊಂದು ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ. ಪಂಚಾಯತ್ ಮಟ್ಟದಲ್ಲಿ ರಚನೆಯಾಗುವ ಟಾಸ್ಕ್‌ಫೋರ್ಸ್‌ನಲ್ಲಿ, ಪಂಚಾಯತ್ ಇಲಾಖೆ ನೌಕರರು, ಕಂದಾಯ ಇಲಾಖೆ ನೌಕರರು, ಅಗ್ನಿಶಾಮಕ ವಿಭಾಗ, ಪೊಲೀಸ್ ಇಲಾಖೆ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದರು.
ಕಾಳಜಿ ಕೇಂದ್ರಗಳ ರಚನೆಗೆ ಸೂಚನೆ
ಮಳೆಯಿಂದ ಕುಸಿಯಬಹುದಾದ ಮನೆಗಳನ್ನು ಗುರುತಿಸಿ ಅಂತಹ ಮನೆಗಳಲ್ಲಿ ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರ್ ಅವರ ಪಿ.ಡಿ ಖಾತೆಯಲ್ಲಿ 776 ಕೋಟಿ ರೂ ಟಾಸ್ಕ್ ಫೋರ್ಸ್ ಹಣ ಇದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ 4 ತುಕಡಿಗಳು ಈಗಾಗಲೇ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ವಿಪತ್ತು ನಿರ್ವಹಣಾ ತುಕಡಿಗಳನ್ನು ನಿಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.