ಮಂಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಡೆಗೋಡೆ ಮನೆ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಭಾರೀ ಮಳೆಗೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿನಗರ ಎಂಬಲ್ಲಿ ದುರಂತ ಸಂಭವಿಸಿದ್ದು, ತಡೆಗೋಡೆಯೊಂದು ಮನೆಯ ಮೇಲೆಯೇ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಮನೆಯೊಳಗೆ ವಾಸ್ತವ್ಯವಿದ್ದ ಯಾಸಿರ್, ಪತ್ನಿ ಮರಿಯಮ್ಮ, ಮಕ್ಕಳಾದ ರಿಯಾನ್ ಮತ್ತು ರಿಫಾನ್ ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅಬೂಬಕ್ಕರ್ ಎಂಬುವವರಿಗೆ ಸೇರಿದ ಜಾಗದ ಕಾಂಪೌಂಡ್ ತಡೆಗೋಡೆ ಬೆಳ್ಳಂಬೆಳಿಗ್ಗೆ ಏಕಾಏಕಿ ಕುಸಿದು ಯಾಸಿರ್ ಅವರ ಮನೆಯ ಮೇಲೆಯೇ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.