ಬೆಂಗಳೂರು: ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಬೆಂಗಳೂರು ನಗರದ 12.5 ಲಕ್ಷ ಮನೆಗಳಲ್ಲಿ ಲಾರ್ವಾ ಪತ್ತೆಗಾಗಿ ಪ್ರತಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಶಾ ಕಾರ್ಯಕರ್ತೆಯರ ಜೊತೆಗೆ ಎನ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ನರ್ಸಿಂಗ್ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ತಡೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಆರೋಗ್ಯ ತಪಾಸಣೆ ಜಾಸ್ತಿಯಾಗಿದ್ದು, ಈ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿನ 28 ಲಕ್ಷ ಮನೆಗಳ ಪೈಕಿ 12.5 ಲಕ್ಷ ಮನೆಗಳಲ್ಲಿ ಪ್ರತಿ 14 ದಿನಕ್ಕೊಮ್ಮೆ ಪರಿಶೀಲನೆ ನಡೆಸಲಾಗುವುದು. ಸದ್ಯ ಆಶಾ ಕಾರ್ಯಕರ್ತೆಯರ ತಂಡಗಳನ್ನು ರಚಿಸಲಾಗಿದೆ. ಆದರೆ ಎಲ್ಲಾ ಮನೆಗಳನ್ನು ಅವರಿಂದ ಪರಿಶೀಲಿಸಿ ಲಾರ್ವಾ ಪತ್ತೆ ಮಾಡಿ ನಾಶ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಎನ್‌ಎಸ್‌ಎಸ್ ಕಾರ್ಯಕರ್ತರು, ನರ್ಸಿಂಗ್ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 1500 ತಂಡಗಳನ್ನು ರಚಿಸಿ ಪ್ರತಿದಿನ ಲಕ್ಷ ಮನೆಗಳ ಆಸುಪಾಸಿನಲ್ಲಿ ಪರಿಶೀಲಿಸುವಂತೆ ಸೂಚಿಸಲಾಗುವುದು ಎಂದರು.
ಡೆಂಗ್ಯೂ ಪ್ರಕರಣಗಳ ಪರೀಕ್ಷೆಗೆ ಸಂಬಂಧಿಸಿದ ಉಪಕರಣಗಳ ಕೊರತೆಯಿಲ್ಲ. ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6000 ಪರೀಕ್ಷಾ ಸಾಮಗ್ರಿಗಳಿವೆ. ಜ್ವರದ ಲಕ್ಷಣಗಳಿರುವವರು ಆರೋಗ್ಯ ಕೇಂದ್ರಕ್ಕೆ ಬಂದರೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಜೊತೆಗೆ ಶೀಘ್ರದಲ್ಲೇ 30 ಸಾವಿರ ಪರೀಕ್ಷಾ ಸಾಮಗ್ರಿ ನೀಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.