Mysore
25
scattered clouds
Light
Dark

ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ: ಇದಕ್ಕೆ ಸರ್ಕಾರವೇ ಹೊಣೆ ಎಂದ ಎಚ್‌ಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಆರೋಪಿ ದರ್ಶನಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವುದಕ್ಕೆ ಸರ್ಕಾರವೇ ನೇರ ಹೊಣೆ ಆಗಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದರ್ಶನ್‌ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮಗನನ್ನು ಕಳೆದುಕೊಂಡು ರೇಣುಕಾಸ್ವಾಮಿ ಕುಟುಂಬಸ್ಥರು ನೋವಿನಲ್ಲಿದ್ದಾರೆ. ಇತ್ತ ನಮ್ಮದು ಪಾರದರ್ಶಕ ಹಾಗೂ ಹೈಟೆಕ್‌ ಸರ್ಕಾರ ನಮ್ಮದು ಎಂದು ದಿನಕ್ಕೊಂದು ಕತೆ ಹೇಳುತ್ತಾ ಗೃಹಮಂತ್ರಿ ಡಾ. ಜಿ.ಪರಮೇಶ್ವರ್‌ ಇದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನೀಡುತ್ತಿರುವುದೇ ಹೇಟೆಕ್‌ ಹಾಗಿದೆಯಾ, ಇದಕ್ಕೆಲ್ಲಾ ಸರ್ಕಾರವೇ ಹೊಣೆಯಾಗಬೇಕು ಎಂದು ಅವರು ಕಟುವಾಗಿ ಟೀಕಿಸಿದರು.

ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ಪಂಚತಾರಾ ಸೌಲಭ್ಯವಿದೆ. ಜೈಲಿನಲ್ಲಿ ಈ ವ್ಯವಸ್ಥೆ ಈ ಹಿಂದಿನಿಂದಲೂ ಇದೆ. ಅದು ದರ್ಶನ್‌ ಅವರ ಮೂಲಕ ಹೊರಗೆ ಬಂದಿದೆ. ಸರ್ಕಾರ, ಅಧಿಕಾರಿಗಳಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲದಂತಾಗಿದೆ. ಸರ್ಕಾರದ ಮಂತ್ರಿಗಳಿಗೆ ಸಿಎಂ ಹಗರಣಗಳ ಬಗ್ಗೆ ಮಾತನಾಡಲು ಸಮಯವಿಲ್ಲ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ನ್ಯಾಯಾಲಯದಿಂದ ಮಾತ್ರ ನಮಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದರು.