ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಬಗ್ಗೆ ದೂರು ಆಲಿಸಲು ಎಸ್‌ಐಟಿ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಸಂತ್ರಸ್ಥೆಯರಿಗೆಂದೇ ಸಹಾಯವಾಣಿ(6360938947) ಆರಂಭಿಸಿದೆ. ಪ್ರತಿನಿತ್ಯವು ಸಹಾಯವಾಣಿಗೆ ಕರೆ ಮಾಡುತ್ತಿರುವ ಸಂತ್ರಸ್ತೆಯರು ಮತ್ತು ಅವರ ಸಂಬಂಧಿಕರು ದಯವಿಟ್ಟು ವಿಡಿಯೋಗಳನ್ನು ಅಳಿಸಿ ನಮ್ಮ ಮರ್ಯಾದೆ ಕಾಪಾಡಿ ಎಂದು ಎಸ್‌ಐಟಿ ಅಧಿಕಾರಿಗಳನ್ನು ಮನವಿ ಮಾಡುತ್ತಿದ್ದಾರೆ.
ಕರೆ ಸ್ವೀಕರಿಸಲೆಂದೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ನಿತ್ಯವು 10 ರಿಂದ 20 ದೂರವಾಣಿ ಕರೆಗಳು ಬರುತ್ತಿದ್ದು, ಎಸ್‌ಐಟಿ ತಂಡ ಪ್ರತಿಯೊಬ್ಬರ ಮಾತುಗಳನ್ನು ಆಲಿಸಿ ಗಂಭೀರವಾಗಿ ಪರಿಗಣಿಸುತ್ತಿದೆ. ಸಂತ್ರಸ್ತೆಯರ ಒಪ್ಪಿಗೆ ಪಡೆದು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದು, ಹೇಳಿಕೆ ನೀಡದ ಸಂತ್ರಸ್ತೆಯರಿಗೆ ಸಿಬ್ಬಂದಿ ಧೈರ್ಯ ತುಂಬುತ್ತಿದ್ದಾರೆ. ಯಾವುದೇ ಸಮಯದಲ್ಲಾದರೂ ಕರೆ ಮಾಡಿ ಹೇಳಿಕೆ ನೀಡುವಂತೆ ಕೋರುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಮತ್ತು ಇತರೆಡೆ ವಿಡಿಯೋಗಳು ಹರಿದಾಡುತ್ತಿವೆ. ವಿಡಿಯೋ ನೋಡಿದ ಪರಿಚಯಸ್ಥರು, ಸಂಬಂಧಿಕರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದರಿಂದ ನಮಗೆ ತೀವ್ರ ಬೇಸರವಾಗಿ, ಮಾನಸಿಕವಾಗಿ ಕುಗ್ಗಿದ್ದೇವೆ. ದಯಮಾಡಿ ಎಲ್ಲ ಕಡೆ ಹರಿದಾಡುತ್ತಿರುವ ವಿಡಿಯೋಗಳನ್ನು ಅಳಿಸಿ ಎಂದು ಕೆಲ ಸಂತ್ರಸ್ತೆಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ. ರಸ್ತೆ ಹಾಗೂ ಮಾರುಕಟ್ಟೆಗಳಲ್ಲಿ ಅವಮಾನವಾಗುತ್ತಿದೆ. ಹಲವರ ಮೊಬೈಲ್ ಹಾಗೂ ಕಂಪ್ಯೂಟರ್‌ಗಳಲ್ಲಿ ವಿಡಿಯೋಗಳಿವೆ ಅಂಥವರನ್ನು ಗುರುತಿಸಿ ಕ್ರಮ ಕೈಗೊಳ್ಳಿ ಎಂದು ಸಂತ್ರಸ್ತೆಯೊಬ್ಬರ ಕುಟುಂಬಸ್ಥರು ಕೋರಿದ್ದಾರೆ.





